ಪುಟ:ನೋವು.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು ೨೧ ಹಳ್ಳಿಯ ಹೊರ ವಲಯದತ್ತ ಧಾವಿಸಿದ.

    ಗೌಡರು ಗೋವಿಂದನೊಡನೆ, ಹಾಗೂ ಹಿಂಬಾಲಿಸಿ ಬಂದ ಇತರ ಮೂವರು ನಾಲ್ವರೊಡನೆ, ಚಾವಡಿಯ ಕಡೆಗೆ ನಡೆದರು. ಹೆಜ್ಜೆಗಳು ಭಾರವಾಗಿದ್ದುವು. ಹಗಲೆಲ್ಲ ಬಿಸಿಲನ್ನು ಸಹಿಸಿಕೊಂಡಿದ್ದ ಅವರ ಕಣ್ಣುಗಳು ಈಗ ಉರಿಯತೊಡಗಿದುವು.
    ಟಾರ್ಚನ್ನು ಆಗೊಮ್ಮೆ ಈಗೊಮ್ಮೆ ಉರಿಸುತ್ತ ಆರಿಸುತ್ತ ಗೌಡರ ಮಗ್ಗುಲಲ್ಲಿ ಅವರಿಗಿಂತ ಒಂದು ಹೆಜ್ಜೆ ಹಿಂದೆ ನಡೆದಿದ್ದ ಗೋವಿಂದ, ತನ್ನ ಯೋಚನೆಗಳ ಕುದುರೆಯ ಕಡಿವಾಣವನ್ನು ಸಡಿಲಿಸಿದ. 
    ತನಗೆ ಕೇಳಿಸಲಿಲ್ಲವೆ? ಅಬ್ದುಲ್ಲ ಮನೆಯಲ್ಲಿದ್ದರೆ ಕರಕೊಂಡ್ಬಾ–ಎಂದರು ಗೌಡರು. ಯಾಕೆ? ಸಂಶಯ ಪರಿಹಾರಕ್ಕೊ?ಸಂಶಯ ಏನು ಬಂತು? ಅಂಗೈ ಹುಣ್ಣಿಗೆ ಬೇಕೆ ಕನ್ನಡಿ? ಮುನಿಯನನ್ನು ಯಾರು ಕೊಂದಿರಬಹುದು? ಆ ಪ್ರಶ್ನೆಗೆ ಕಣಿವೇಹಳ್ಳಿಯ ಎಳೇ ಮಗು ಕೂಡಾ ಉತ್ತರ ಕೊಟ್ಟೀತು; ಸರಿಯಾದ ಉತ್ತರ ಕೊಟ್ಟೀತು. ಅದಕ್ಕೇ ತಾನು ಅಂದದ್ದು: ಪೋಲೀಸರಿಗೆ ಕಂಪ್ಲೇಂಟು ಕೊಡಬೇಕಾಗುತ್ತೇನೋ ಅಂತ. ಮುನಿಯನ ಜೀವ ದೊಡ್ಡದಾಗಿ ಇವರಿಗೆ ಕಾಣಿಸದೇ ಇರಬಹುದು. ಅಥವಾ, ಸತ್ತವನ್ನು ಸತ್ತ, ಇನ್ನು ಯಾಕೆ ಹಗರಣ? –ಅಂತ ಇರಬಹುದು. ಅಬ್ದುಲ್ಲನ ಕುರೂಪಿ ಹೆಂಡತಿಯ ಮುಖ ನೋಡಿ ಯಾರೂ ಅವನನ್ನು ಫಾಶೀ ಶಿಕ್ಷೆಯಿಂದ ಉಳಿಸಹೋಗುವುದಿಲ್ಲ. ಮತ್ತೆ? ಶಾಮೇಗೌಡರ ರಾಜ್ಯ ಕಣಿವೇಹಳ್ಳಿ. ಪೋಲೀಸರು ಇಲ್ಲಿಗೆ ಬರುವುದು ಅವರಿಗೆ ಇಷ್ಟವಿಲ್ಲ...
    ಒಬ್ಬರಿಗೆ ಇಷ್ಟವಿಲ್ಲ ಅಂತ ಇಷ್ಟೊಂದು ಕೌತುಕದ ಘಟನೆ ಹೊರಗಿನ ಲೋಕಕ್ಕೆ ತಿಳಿಯದೆ ಹೋಗಬೇಕೆ? ತಾನೇ ನಗರಕ್ಕೆ ಹೋಗಿ ಪೋಲೀಸರಿಗೆ ಒಂದು ಮೂಕರ್ಜಿ ಕೊಟ್ಟರೇನಾದೀತು? ಓರ್ವ ಸುದ್ದಿಗಾರರಿಂದ ಅಂತ, ಪತ್ರಿಕೆಗಳಿಗೆ ಬಾತ್ಮಿ ಕಳಿಸಿದರೇನಾದೀತು? ಹೇಗೂ ನಗರಕ್ಕೆ ಹೋದಾಗಲೆಲ್ಲ ವೃತ್ತಪತ್ರಿಕೆ ಕೊಂಡು ತರುವುದು ತನಗೆ ಅಭ್ಯಾಸವಾಗಿದೆ. ಒಮ್ಮೆ ಆ ಪತ್ರಿಕೆಯ ಸಂಪಾದಕರನ್ನೇ ಮುಖತಃ ಕಂಡು ನಿಜ ಸಂಗತಿ ತಿಳಿಸಿಬಿಟ್ಟರಾಯಿತು. ಶಾಮೇಗೌಡರಿಗೆ ಗೊತ್ತಾದರೆ ಮಾತ್ರ ಅವಾಂತರವಾಗಬಹುದು. ಅಪ್ಪಯ್ಯ ಕೊಗಾಡ ಬಹುದು. ಆದರೆ, ಇದಕ್ಕೆಲ್ಲ ಹೆದರಿ ಸುಮ್ಮನಿರಬೇಕೆ ತಾನು?
    ಅಸ್ಪ್ರುಶ್ಯರ ಉದ್ಧಾರ ಮಾಡಿ–ಅಂತ ಗಾಂಧಿ ಹೇಳಿದಾಗ ತಾನು ಹುಟ್ಟಿರಲಿಲ್ಲ, ನಿಜ. ಆದರೇನಾಯಿತು? ಅದರ ಮಹತ್ವ ತನಗೆ ತಿಳಿಯದೆ? ಈಗ ಗಾಂಧಿ ಇಲ್ಲ; ಸತ್ತು ಅನೇಕ ವರ್ಷಗಳಾದುವು. ಅವನ ಜತೆ ಅವನ ಉಪದೇಶಗಳೂ ಸತ್ತವೆ?
    ಗೋವಿಂದನಿಗೆ ನಗು ಬಂತು. ಆತ ಗಾಂಧೀ ಅನುಯಾಯಿ ಎಂದಲ್ಲ. ಆದರೂ ಹಳ್ಳಿಯ ರಾಜಕಾರಣದಲ್ಲಿ ಗಾಂಧೀ ತತ್ವದ ಪ್ರತಿಪಾದನೆಯಿಂದ ಲಾಭವಾಗುವಂತಿದ್ದರೆ ಆ ಕೆಲಸ ಯಾಕೆ ತಾನು ಮಾಡಬಾರದು ?
    ಎಂಟು ತಿಂಗಳಾಯಿತಲ್ಲ ಮುನಿಯ ಬಂದು ಹೊಲ ಕೊಳ್ಳುವ ವಿಷಯ ತನ್ನೊಡನೆ ಪ್ರಸ್ತಾಪಿಸಿ?
    ಆಗ ತಾನೆಂದಿದ್ದೆ:
    "ಕೊಂಡ್ಕೋ ಮುನಿಯ, ಭೂಮಿತಾಯಿಾನ ಬ್ರಾಹ್ಮಣರಾಗಲೀ ಗೌಡರಾಗಲಿ ಗುತ್ತಿಗೆ ಹಿಡಿದಿದಾರಾ? ಕೊಂಡ್ಕೋ."