ಪುಟ:ನೋವು.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ನೋವು

ಶಾಮೇಗೌಡರು ಮುನಿಯನನ್ನು ಕೇಳಿದ್ದರು: - " ಯಾರು ನಿನಗೆ ವಕೀಲರ ಅಡ್ರೆಸ್ ಕೊಟ್ಟೋರು?" -ಮುನಿಯ ಗೋವಿಂದನ ಹೆಸರು ಹೇಳಲಿಲ್ಲ. - " ಯಾರ್ನೋ ಕೇಳ್ಕಂಡೋದೆ, ಒಡೆಯಾ." - ಈ ಕಾರಭಾರ ಗೋವಿಂದನದೇ ಇರಬೇಕೆಂಬ ಬಗೆಗೆ ಸಂದೇಹವಿಲ್ಲ ಗೌಡರಿಗೆ. ಆದರೆ ಬಹಿರಂಗವಾಗಿ ಹಾಗೆ ಹೇಳುವಂತಿಲ್ಲ . ಸ್ನೇಹಿತನ ಮನಸ್ಸು ನೋಯಿಸಬಾರದೆಂದು, ಶ್ರಿನಿವಾಸಯ್ಯನವರೊಡನೆ ಆ ಪ್ರಸ್ತಾಪವನ್ನು ಮಾಡಿರಲೂ ಇಲ್ಲ. ಈಗ ಆಗಬಾರದ್ದು ಆಗಿಹೋಯಿತು. - ಬೆಂಕಿ ಮನೆಯನ್ನು ಅರ್ಧ ಸುಟ್ಟದ್ದಾಯಿತು; ಉಳಿದರ್ಧವನ್ನಾದರೂ ಉಳಿಸಬೇಕು. ಯಾವುದೋ ಮನೆ ಉರಿಯುತ್ತಿದ್ದರೆ, ಅದರ ಹತ್ತಿರ ನಿಂತು ಮೈ ಕಾಯಿಸಿಕೊಳ್ಳುವ ಪ್ರವೃತ್ತಿ ಎಷ್ಟು ಕೆಟ್ಟದ್ದು! ಒಳ್ಳೆಯ ಸಮಯ ನೋಡಿ ಗೋವಿಂದನಿಗೆ ತಾವು ಬುದ್ಧಿ ಹೇಳಬೇಕು. ಅವನ ತಂದೆ ಆ ಕೆಲಸ ಮಾಡದಿದ್ದರೆ ತಾವಾದರೂ ಮಾಡಬೇಕು...... ....ಚಾವಡಿ ಸಮಿಾಪಿಸಿತು.

ಅಲ್ಲಿ ಕಂದೀಲು ಉರಿಸಿದ್ದರು. ಪಂಚಾಯತಿಯ ವಿಷಯದಲ್ಲಿ ಯಾವಾಗಲೂ ಹೊರಗಿನವರು ಶ್ರಿನಿವಾಸಯ್ಯ. ಅವರು ಒತ್ತಟ್ಟಿಗೆ ಕುಳಿತಿದ್ದರು. ಚಾವಡಿಯ ಮಧ್ಯದಲ್ಲಿ ಕೃಷ್ಣೇಗೌಡ ಮತ್ತು ಇತರರಿದ್ದರು. 

ಶಾಮೇಗೌಡರು ಬಂದಾಗ ಮಾತು ಅಡಗಿ ಮೌನ ನೆಲೆಸಿತು.

ಗೌಡರು ಶ್ರಿನಿವಾಸಯ್ಯನವರ ಮಗ್ಗುಲಲ್ಲಿ ಕುಳಿತರು. 
ಒಂದು ನಿಮಿಷ ಸುಮ್ಮನಿದ್ದು ಗೌಡರು ಶ್ರೀನಿವಾಸಯ್ಯನವರೊಡನೆ, ಇತರರಿಗೂ ಕೇಳಿಸುವಂತೆ ಗಟ್ಟಿಯಾಗಿಯೇ, “ ಏನೋ ಲೋಪ ಆಗೋ ಹಂಗೆ ನಡಕಂಡಿದೀವೀಂತಾಯ್ತು. ಊರ ದೈವ ಮುನಿದಿದೆ. ಮುನಿಯ ಬಲಿಯಾದ ಪಾಪ!" ಎಂದರು. 

ಎಲ್ಲರನ್ನೂ ದಹಿಸುತ್ತಿದ್ದ ಸಂಶಯದ ಬೆಂಕಿಗೆ ಆ ಮಾತು ನೀರಾಯಿತು. ಇನ್ನು ಉಳಿದದ್ದು ಕಪ್ಪು ಕೆಂಡಗಳಿಂದ ಹೊರಡುತ್ತಿದ್ದ ಬಿಸಿ ಹೊಗೆ. ಅಷ್ಟರಲ್ಲಿ ವೀರಾಚಾರಿ ಬಂದ, ಶಾಮೇಗೌಡರ ಬಳಿ ಬಾಗಿ ಕುಳಿತು ಇಳಿದನಿಯಲ್ಲಿ ಅಂದ: - " ಮಗನಿಗೆ ಎಣ್ಣು ನೋಡಾಕೆ ಅಂತ ನಿನ್ನೆ ಒತ್ತಾರೇನೇ ಚಿತ್ರಾಪುರಕ್ಕೆ ಓದ್ನಂತೆ. ವಾಪ್ಸು ಬರೋಕೆ ಎ೦ಟತ್ತು ದಿವಸ ಆದಾತೂಂತ ಅವನ ಎಣ್ತಿ ಯೋಳ್ತಾಳೆ," - "ಸರಿ!" -

ಕಿವಿ ನಿಮಿರಿಸಿ ನಿಂತಿದ್ದ ಗೋವಿಂದನಿಗೆ ಆ ಮಾತು ಕೇಳಿಸಿತು.
ಚಾವಡಿಯ ಮಧ್ಯದಿಂದಲೂ ಒಬ್ಬನೆಂದ :
" ಯಾರು ಅಬ್ದುಲ್ಲನೇ? ಅವನು ಊರಲ್ಲಿಲ್ಲ."
" ಸರಿ! ಸರಿ!" ಎಂದರು ಗೌಡರು, ಗಟ್ಟಿಯಾಗಿ. -

- ಅಬ್ದುಲ್ಲ ಇಲ್ಲವೆಂಬ ಸುದ್ದಿಯಿಂದ, ಹೊಗೆಯಾಡುತ್ತಿದ್ದ ಇದ್ದಲು ಚೂರುಗಳೂ ತಣ್ಣ ಗಾದುವು.