ಪುಟ:ನೋವು.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|

       ನೋವು                           ೨೫

"ನಡೀರಿ ಅಯ್ಯೋರೇ, ಆಯ್ತಲ್ಲ.” ಎಂದರು ಗೌಡರು, ಏಳುತ್ತ. ಚಾವಡಿಯಲ್ಲಿದ್ದವರೆಲ್ಲ ಎದ್ದು, ಮುನಿಯ-ಪಾಪ-ಸತ್ತನಲ್ಲ ಎಂದು ಮಾತನಾಡುತ್ತ ಚೆದರಿದರು. ಶ್ರೀನಿವಾಸಯ್ಯ ಮಗನ ಕಡೆ ನೋಡಿ ಅಂದರು : " ಮನೆಗೆ ಹೋಗು, ಗೋವಿಂದ. ನಾನು ಈಗ ಬ೦ದೆ." ಗೋವಿಂದ ಕೇಳಿದ: "ಟಾರ್ಚು ಬೇಕಾ?” " ಬೇಡ," ಎಂದರು ಶ್ರೀನಿವಾಸಯ್ಯ; ಕ್ಷಣ ಬಿಟ್ಟು, " ಕೊಟ್ಟಿರು," ಎಂದರು. ನಿಧಾನವಾಗಿ ನಡೆಯತೊಡಗಿದ ತಂದೆಯನ್ನೂ ಗೌಡರನ್ನೂ ಬಿಟ್ಟು ಗೋವಿಂದ ಮನೆಯ ಕಡೆ ಹೆಜ್ಜೆ ಹಾಕಿದ.

 ಅವನಿಗನಿಸಿತು:

ಐವತ್ತು ದಾಟಿದವರು ಹೀಗೆಯೇ. ಪ್ರತಿಯೊಂದು ಚೂರು ಪ್ರಗತಿಗೂ ಇವರು ಅಡ್ಡಿ. ಹಳೆಯ ಕಟ್ಟುಪಾಡುಗಳಿಗೆ ಅನುಸಾರವಾಗಿಯೇ ಇವರು ನಡೆಯಬೇಕು. ಶಾಮೇಗೌಡರ ಮಾತಂತಿರಲಿ. ವಯಸ್ಸಿನಲ್ಲಿ ಚಿಕ್ಕವನಾದ ಕೃಷ್ಣೇಗೌಡನಿಗಾದರೂ ಬುದ್ಧಿ ಬೇಡವೆ? ದೇಶಕ್ಕೆ ಸ್ವಾತಂತ್ರ ಬಂದು ಹತ್ತು ಹನ್ನೆರಡು ವರ್ಷ ಸಂದಿವೆ. ನಡೆದಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಎಲ್ಲ ಓಟು ಕೊಟ್ಟಿದ್ದಾರೆ. ಹೊಸ ಶಾಸನಗಳು ಜಾರಿಗೆ ಬಂದಿದೆ. ಆದರೆ ಈ ಜನರ ಪಾಲಿಗೆ ಲೋಕದಲ್ಲಿ ಯಾವ ಬದಲಾವಣೆಯೂ ಆಗಿಲ್ಲ.... ಮನೆ ತಲಪಿದಾಗ ಗೋವಿಂದನೆಂದುಕೊಂಡ : "ಯಾರ ಹಂಗೇನು ನನಗೆ ? ಆದಷ್ಟು ಬೇಗನೆ—ಊಹೂಂ-ನಾಳೆಯೇ ನಗರಕ್ಕೆ ಹೋಗಿ ಬರಬೇಕು..."

ಸ್ವಲ್ಪ ದೂರ ಮೌನವಾಗಿ ನಡೆದ ಶ್ರೀನಿವಾಸಯ್ಯ – ಶಾಮೇಗೌಡರು, ದಾರಿ ಕವಲೊಡೆದಿದ್ದ ನಿರ್ಜನ ಪ್ರದೇಶದಲ್ಲಿ ಕೆಲ ನಿಮಿಷ ನಿಂತರು. 

ಗೌಡರೆಂದರು : " ಅಬ್ದುಲ್ಲ ನಿನ್ನೆಯೇ ಊರು ಬಿಟ್ಟದ್ದು ಒಳ್ಳೆದಾಯ್ತು." “ ಹೌದು," ಎಂದರು ಶ್ರೀನಿವಾಸಯ್ಯ. " ಅವನು ಬಂದ್ಮೇಕೇ ಮುನಿಯನ ಮಗನಿಗೆ ಹೊಲ ಕೊಡಿಸ್ಟಿಡ್ವೇಕು." " ಸరి ... ಕೋರ್ಟು-" "ಅದೇನು ಮಾಡ್ತದೆ? ಕಾಗದ ಪತ್ರ ಸರಿಯಾಗೈತೆ, ಹೊಲ ಬಿಟ್ಕೊಡು ಅಂತ ಪ್ರತಿವಾದಿಗೆ ತಾಕೀತು ಮಾಡ್ತದೆ, ಅಷ್ಟೆ." " ಹುಂ."

" ಅವನು ಊರು ಬಿಟ್ಟು ಓದ್ರೂ ಸರಿ; ಇಲ್ಲೇ ಕೂಲಿ ನಾಲಿ ಮಾಡಿದ್ರೂ ಸರಿ."
"ಹು೦." - 

ಗೌಡರ ನಾಲಿಗೆಯ ತುದಿವರೆಗೂ ಬಂತು: 'ಗೋವಿಂದನಿಗಷ್ಟು ಹೇಳಿ-ಗಲಾಟೆ ಮಾಡ್ಬೇಡ ಅಂತ' ಎಂಬ ಮಾತು.