ಪುಟ:ನೋವು.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ನೋವು ೪೫ ಅವರು ಸೇದಿ ಚುರುಟಿ ಎಸೆದಿದ್ದ ಸಿಗರೇಟಿನ ತುಂಡನ್ನು ಅವನು ಎತ್ತಿಕೊಂಡಿದ್ದ. ಉರಿಯುವ ಸೌದೆಗೆ ಮುಟ್ಟಿಸಿ ಅದನ್ನು ಸೇದಲು ನೋಡಿದ್ದ. ಕೆಂಡಗಳ ಕಾವಿಗೆ ಮುಖ ಕಾದಿತ್ತು. ಹೊಗೆಸೊಪ್ಪಿನ ಹಾಗೂ ಕಾಗದದ ಹೊಗೆ ಗಂಟಲೊಳಕ್ಕೆ ಹೋಗಿ ಕೆಮ್ಮು ಬಂದಿತ್ತು. ಊರಿನ ಶಾಲೆಯ ಇಬ್ಬರು ಉಪಾಧ್ಯಾಯರಲ್ಲಿ ಒಬ್ಬರು ನಶ್ಯದವರು, ಇನ್ನೊಬ್ಬರು ಬೀಡಿ ಯವರು. ಅಯ್ಯನವರ ಮಗ ಗೋವಿಂದ ಊರಿನ ಯುವಕರು ರಂಗ ಕಟ್ಟಿದ್ದ ದಿವಸ ಆಟ ನಡೆಯುತ್ತಿದ್ದಾಗ ಜನರ ಗುಂಪಿನಿಂದ ದೂರ ನಿಂತು ಕತ್ತಲಲ್ಲಿ ಸಿಗರೇಟು ಕುಡಿದದ್ದನ್ನು ಕರಿಯ ಬಲ್ಲ. ನಗರಕ್ಕೆ ಹೆಚ್ಚಾಗಿ ಹೋಗಿ ಬರುವ ಅಭಾಸವಿರುವುದು ಕಣಿವೇಹಳ್ಳಿಯಲ್ಲಿ ಅವನೊಬ್ಬನಿಗೇ. ಅಲ್ಲಿನ ಹೋಟೆಲುಗಳ ವೈಭದದ ವರ್ಣನೆಯನ್ನು ಒಮ್ಮೆ ಗೋವಿ೦ದ ಮಾಡಿದುದನ್ನು ಕರಿಯ ದೂರ ನಿಂತು ಕೇಳಿದ್ದ.

       —ಆಗ ಗೋವಿಂದ ಅಂದಿದ್ದನಲ್ಲ?
       "ನೀವು ಕೂಪಮಂಡೂಕಗಳು ಕಣ್ರೋ."
       ಒಬ್ಬ ಕೇಳಿದ್ಧ:
       "ಅಂದ್ರೇನು ಗೋವಿಂದಪ್ಪ ?"
       "ಬಾವಿಯೊಳಗಿನ ಕಪ್ಪೆಗಳು ಅಂತ. ವರ್ಷಕ್ಕೆ ಒಂದ್ಸರ್ತಿನಾದ್ರೂ ನಗರಕ್ಕೆ ಹೋಗಿ 

ನೀವು ಪ್ರಪಂಚ ನೋಡ್ಬೇಕು ಕಣ್ರೋ. ಇಲ್ದೇ ಹೋದ್ರೆ ಹಳ್ಳೀ ಗಮಾರ್‍ರು ಹಳ್ಳೀ ಮುಕ್ಕರು ಅಂತ ಶಹರದೋರು ನಿಮ್ಮನ್ನ ಲೇವಡಿ ಮಾಡ್ತಾರೆ."

       ಯಾರೋ ಒಬ್ಬನೆಂದಿದ್ದ [ಶಂಕರ ಇರಬೇಕು] : 
       "ಕಣಿವೇ ಅಳ್ಳೀ ಪೈಕಿ ನೀ ಒಬ್ಬ ಪರ್ಪಂಚ ನೋಡಿದೀಯಲ್ಲ. ಅಷ್ಟು ಸಾಕು ಬಿಡು, ಗೋವಿಂದಪ್ಪ."
       ಸುತ್ತಲಿದ್ದವರು ನಕ್ಕಿದ್ದರು.
       ಅದು ನೆನಪಾಗಿ ಕರಿಯನಿಗೂ ಈಗ ನಗಬೇಕೆನ್ನಿಸಿತು. ಆದರೂ ರಂಗಣ್ಣನ ಕಡೆಗೊಮ್ಮೆ ನೋಡಿ ಸುಮ್ಮನಾದ. ದೃಷ್ಟಿ ರಂಗಣ್ಣ ಎಸೆದಿದ್ದ ಸಿಗರೇಟಿನ ತುಂಡಿನತ್ತ ಮತ್ತೆ 

ಹೊರಳಿತು. ಹೊಗೆ ಇರಲಿಲ್ಲ – ಬೂದಿಯಾಗಿ ಹೋಗಿತ್ತು ಸಿಗರೇಟು.

       —ಚಿಕ್ಕ ಗೌಡರಿಗೆ ಧೈರ್ಯ, ಕಣಿವೇಹಳ್ಳಿಯಲ್ಲಿ ಸೇದದವರು ಇಲ್ಲಿ ತನ್ನೆದುರಿಗೇ 

ಸೇದಿದರು. ಹಳ್ಳಿಗೆ ಹೋಗಿ ಈ ಸಂಗತಿಯನ್ನು ಗೌಡರಿಗೆ ತಾನು ಹೇಳಿದರೊ?

       ಆ ತುಂಟ ಯೋಚನೆ ಕರಿಯನನ್ನು ಕುಲುಕಿತು. ಆತ ಸಣ್ಣನೆ ನಕ್ಕ.
       ಅದನ್ನು ನೋಡಿ ರಂಗಣ್ಣ ಕೇಳಿದ:
       "ಏನದು ಕರಿಯ?"
       ಪ್ರಶ್ನೆ ಕರಿಯನನ್ನು ಗಾಬರಿಗೊಳಿಸಿತು.
       "ಏನಿಲ್ರಾ..."
       "ಇಲ್ವಾ ? ನಗ್ತಾ ಇದ್ದೆ ಮತ್ತೆ ?”
       "ಏನೇನೂ ಇಲ್ರಾ... ಅಕಾ, ಬಸ್ಸು !” 
       ಏನೇನೂ ಇಲ್ರಾ–ಎಂದು ಕರಿಯ ಅನ್ನುತ್ತಿದ್ದಂತೆಯೇ ದೂರದಲ್ಲಿ ಕಡಿದಾದ 

ರಸ್ತೆಯನ್ನು ಏರಿ ಬರುತ್ತಿದ್ದ ಬಸ್ಸಿನ ಸದ್ದು ಕೇಳಿಸಿತು.