ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೬
ಪರಂತಪ ವಿಜಯ

ನನ್ನ ಬಿಡುಗಡೆಗೂ ಶಂಬರನನ್ನು ಶಿಕ್ಷಿಸುವುದಕ್ಕೂ ಅವನೇ ಏತಕ್ಕೆ ಕಾರಣ ನಾಗಕೂಡದು?
ದುರ್ಮತಿ- ನಿನ್ನ ಮನೋರಥವು ವ್ಯರ್ಥವಾದದ್ದು. ಪರಂತಪನು ಅವನ ದುಷ್ಕೃತ್ಯಕ್ಕೆ ಅನುರೂಪವಾದ ನರಕವನ್ನು ಹೊಂದಿರುವನು.
ಕಾಮಮೋಹಿನಿ- ಶಂಬರನು ಶೀಘ್ರದಲ್ಲಿಯೇ ತನ್ನ ದುಷ್ಕೃತ್ಯಗಳಿಗನುರೂಪವಾದ ನರಕವನ್ನು ಹೊಂದಿಯೇ ಹೊಂದುವನು. ಅದು ಹಾಗಿರಲಿ; ಈ ದುರಾತ್ಮನಾದ ಶಂಬರನು ಸರ್ವಪ್ರಯತ್ನದಿಂದ ನನ್ನನ್ನು ನಿನ್ನ ಸಹಾಯದಿಂದ ವಂಚಿಸಬೇಕೆಂದು ಸಂಕಲ್ಪ ಮಾಡಿರುವಂತೆ ತೋರುತ್ತದೆ. ಉದರಭರಣಕ್ಕಾಗಿ ಇಂಥ ದುಷ್ಕೃತ್ಯವನ್ನು ಮಾಡುವುದಕ್ಕೆ ನೀನು ಒಪ್ಪಿರುವೆ. ಇದು ಮಹಾ ಪಾಪಕೃತ್ಯವು. ಇದರಿಂದ ನಿನ್ನ ಜೀವನಕ್ಕೂ ಯಶಸ್ಸಿಗೂ ಕೇಡುಂಟಾಗುವುದು. ವಾಸ್ತವವಾದ ಅಂಶಗಳನ್ನು ನನಗೆ ಹೇಳು. ನಿನ್ನ ಭಕ್ತಿಗೆ ಅನುರೂಪವಾದ ಫಲವನ್ನು ದೇವರು ಕೊಡುವನು. ಪರಂತಪನು ನಿಜವಾಗಿ ಸತ್ತಿರುವನೇ? ಇದನ್ನು ನೀನು ಸಾಕ್ಷಾತ್ತಾಗಿ ನೋಡಿಬಲ್ಲೆಯಾ? ಸತ್ಯವಾಗಿ ಹೇಳು.
ದುರ್ಮತಿ - ನಾನು ಸಾಕ್ಷಾತ್ತಾಗಿ ಇದನ್ನು ನೋಡಿದವಳಲ್ಲ. ಆದರೆ, ಈ ವರ್ತಮಾನವು ಜನಜನಿತವಾಗಿರುವುದು. ಇದು ಸುಳ್ಳೆಂದು ನಾನು ಎಂದಿಗೂ ಹೇಳಲಾರೆನು, ಉದರಭರಣಾರ್ಥವಾಗಿ ಮಾಡಬಾರದ ಕೆಲಸಗಳನ್ನು ಮಾಡುವುದಕ್ಕೆ ನಾನು ಇಲ್ಲಿ ಬಂದಿಲ್ಲ. ನಿನ್ನ ಪೋಷಣಾರ್ಥವಾಗಿ ನಾನು ನಿಯಮಿಸಲ್ಪಟ್ಟಿರುತ್ತೇನೆ ನನ್ನ ಕೆಲಸವನ್ನು ನಾನು ವಿಶ್ವಾಸದಿಂದ ಮಾಡುತ್ತಿದ್ದೇನೋ ಇಲ್ಲವೋ ಅದನ್ನು ನೀನೇ ಬಲ್ಲೆ. ನನಗೆ ಶಂಬರನು ಇನ್ನು ಯಾವ ವಿಷಯದಲ್ಲಿಯೂ ಯಾವ ಬೋಧನೆಯನ್ನೂ ಮಾಡಿಲ್ಲ, ಇಲ್ಲದ ದೋಷವನ್ನು ನೀನು ಅವನಿಗೆ ಆರೋಪಣೆ ಮಾಡುವೆ. ಅವನು ನಿನ್ನಲ್ಲಿ ನಿಜವಾದ ವಿಶ್ವಾಸವುಳ್ಳವನು. ಪರಂತಪನ ಆಶೆಯನ್ನು ಇನ್ನು ಬಿಡು. ಪರಂತಪನನ್ನು ಅನುಸರಿಸಿ ಲೋಕಾಂತರವನ್ನು ಐದಬೇಕೆಂದು ನಿನಗೆ ಇಷ್ಟವಿದ್ದರೆ, ಮನಸ್ಸು ಬಂದಂತೆ ನಡೆದುಕೊ, ಹಾಗಿಲ್ಲದ ಪಕ್ಷದಲ್ಲಿ, ಶಂಬರನ ಇಷ್ಟಾರ್ಥವನ್ನು ನೆರವೇರಿಸಿ, ಈ ಪ್ರಪಂಚದ ಸುಖಸಾಮ್ರಾಜ್ಯವನ್ನು ಚೆನ್ನಾಗಿ ಅನುಭವಿಸು. ನಿನ್ನ ಕಷ್ಟ ಸುಖಗಳು ನಿನ್ನ ಹಸ್ತಗತವಾಗಿ