ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪರಂತಪ ವಿಜಯ

ಯಲ್ಲಿ ತೆಗೆದುಕೊಳ್ಳಲ್ಪಡತಕ್ಕ ದ್ರವ್ಯವೇ, ತಿಂಗಳಿಗೆ ೨೫ ಲಕ್ಷ ರೂಪಾಯಿ ಗಳವರೆಗೆ ಆಗುತಿದ್ದಿತು. ಈ ದ್ರವ್ಯದಲ್ಲಿ ಇವನು ತನ್ನ ಸ್ವಂತಕ್ಕಾಗಿ ೫ ಲಕ್ಷ ರೂಪಾಯಿಗಳನ್ನು ತೆಗೆದಿಟ್ಟುಕೊಂಡು, ಉಳಿದ ೨೦ ಲಕ್ಷ ರೂಪಾಯಿ ಗಳನ್ನು ಆ ದ್ಯೂತಗೃಹಕ್ಕೆ ಬರತಕ್ಕವರ ಸಕಲ ಸೌಕರ್ಯಾರ್ಥವಾಗಿ ಉಪಯೋಗಿಸುತ್ತಿದ್ದನು. ಈ ಗೃಹದಲ್ಲಿ ಕ್ಷಣಮಾತ್ರ ವಾಸಮಾಡುವುದೂ ಅನೇಕ ವರ್ಷಗಳ ಸ್ವರ್ಗಸುಖಾನುಭವಕ್ಕೆ ಸಮಾನವಾದುದೆಂದು, ಅಲ್ಲಿಗೆ ಬರತಕ್ಕವರು ಭಾವಿಸುತಿದ್ದರು. ಈ ಮನೆಯ ಸುತ್ತಲೂ, ಫಲಪುಷ್ಪಭರಿತ ವಾಗಿ ಚಿತ್ರ ವಿಚಿತ್ರಗಳಾದ ಅನೇಕ ವೃಕ್ಷಗಳಿಂದ ರಮಣೀಯವಾಗಿರುವ ಉದ್ಯಾನವನವು ಪ್ರಕಾಶಿಸುತಿದ್ದಿತು. ಇದರೊಳಗೆ ಅಲ್ಲಲ್ಲಿಯೇ ಅಮೋದ ಭರಿತಗಳಾದ ಲತೆಗಳಿಂದ ಶೋಭಿತವಾಗಿರುವ ಲತಾಗೃಹಗಳೂ, ಅವುಗಳಲ್ಲಿ ವಿಶ್ರಮಿಸಿಕೊಳ್ಳುವುದಕ್ಕೆ ಅನುಕೂಲಗಳಾದ ಶಯನಾಸನಗಳೂ, ಅತಿ ಮನೋಹರಗಳಾಗಿ ಸಜ್ಜುಗೊಳಿಸಲ್ಪಟ್ಟಿದ್ದುವು. ಈ ಲತಾಗೃಹಗಳೊಳಗೊ೦ದರ ಬಳಿಯಲ್ಲಿ, ಒಂದುದಿನ ಸಂಧ್ಯಾಕಾಲದಲ್ಲಿ, ಮಾಧವನೆಂಬ ದೊಡ್ಡ ಮನುಷ್ಯನೊಬ್ಬನು ವಿಹಾರಾರ್ಥವಾಗಿ ಸಂಚರಿಸುತ್ತಿದ್ದನು. ಈತನ ಉಡುಗೆ ತೊಡುಗೆಗಳಿಂದಲೇ, ಇವನು ಕೋಟೀಶ್ವರನೆಂದು ತಿಳಿಯಬಹುದಾಗಿದ್ದಿತು. ಈತನ ಮುಖಭಾವವು, ಇವನು ವಿಚಾರಪರನೆಂಬುದನ್ನು ಪ್ರದರ್ಶನಮಾಡುತಿದ್ದಿತು. ಹೀಗಿರುವಲ್ಲಿ, ಅಲ್ಲಿಗೆ, ಸುಂದರಾಕಾರನಾಗಿಯ, ಯೌವನಸ್ಥನಾಗಿಯೂ, ಅಜಾನುಬಾಹುವಾಗಿಯೂ ಇದ್ದ, ಪರಂತಪನೆಂಬ ಮಹನೀಯನೊಬ್ಬನು ಬಂದನು. ಈತನಲ್ಲಿ, ಸತ್ಯ ಧರ್ಮ ಶಾಸ್ತಿಗಳೆಂಬ ಮೂರುಗುಣಗಳೂ ಮೂರ್ತಿಮತ್ತಾಗಿದ್ದಂತೆ ಕಾಣಬರುತಿದ್ದುವು. ಇವನು ಆ ಉಪವನದ ಸೊಬಗನ್ನು ನೋಡುತ ಆ ಲತಾಗೃಹದ ಬಳಿಗೆ ಬರಲು, ಅಲ್ಲಿ ಸಂಚರಿಸುತಿದ್ದ ಮಾಧವನು, ಇವನ ಸೌಂದರವನ್ನೂ ಇಂಗಿತಗಳನ್ನೂ ನೋಡಿ ವಿಸ್ಮಿತನಾಗಿ, ಈತನ ಗುಣಾತಿಶಯಗಳು ಇವನ ರೂಪ ಯೌವನಗಳಿಗೆ ಅನುರೂಪವಾಗಿರುವುವೆಂದು ತನ್ನ ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ಪರಂತಪನನ್ನು ಕುರಿತು “ ಅಯ್ಯಾ ! ನೀನು ಯಾರು ? ನಿನ್ನನ್ನು ನೋಡಿದ ಮಾತ್ರದಿಂದಲೇ, ನನಗೆ ನಿನ್ನಲ್ಲಿ ಅನಿರ್ವಾಚ್ಯವಾದ ಒಂದುಬಗೆಯ ವಿಶ್ವಾಸವೂ, ಸಂತೋಷವೂ ಉಂಟಾಗಿರುವುವು.” ಎಂದು ಹೇಳಿದನು.