ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೧೦
ಪರಂತಪವಿಜಯ

ಗಳನ್ನು ಹತ್ತು ವರುಷ ಅನುಭವಿಸಿ, ನಿಮ್ಮ ತಾಯಿಯ ರೂಪಲಾವಣ್ಯಗಳು ನಿನ್ನಲ್ಲಿ ಪ್ರತಿಬಿಂಬಿಸಿರುವುದನ್ನು ನೋಡತಕ್ಕ ಸಂಪತ್ತನ್ನು ಹೊಂದುವೆನೆಂದು ನಾನು ಎಣಿಸಿರಲಿಲ್ಲ. ಈಗ ನನ್ನ ಕಷ್ಟಗಳೆಲ್ಲಾ ಪರಿಹಾರವಾಗಿ ತೋರುವುದಲ್ಲದೆ, ಏನೋ ಒಂದು ಸಂತೋಷ ವಿಶೇಷದಿಂದ ನಾನು ಪರವಶನಾಗಿರುವೆನು. ಆದಾಗ್ಯೂ, ನಿನಗೆ ಉಂಟಾಗಿರತಕ್ಕೆ ಪರಾಧೀನತೆಯು ನನಗೆ ಬಹಳ ಸಂಕಟವನ್ನುಂಟು ಮಾಡುತ್ತಲಿರುವುದು. ಈ ಸುಖದುಃಖ ದ್ವಂದ್ವಗಳು, ಒಂದು ವಿಚಿತ್ರವಾದ ಮನೋವಿಕವನ್ನುಂಟುಮಾಡುತ್ತಲಿವೆ. ಈ ನಿರ್ಬಂಧದಿಂದ ಬಿಡುಗಡೆಯಾಗದಿರುವ ಪಕ್ಷದಲ್ಲಿ, ನಮ್ಮಿಬ್ಬರಿಗೂ ಸಾವಕಾಶವಿಲ್ಲದೆ ಮರಣವುಂಟಾದರೆ- ಅದೇ ದೊಡ್ಡ ಕ್ಷೇಮವೆಂದು ಭಾವಿಸುತ್ತೇನೆ.
ಕಾಮಮೋಹಿನಿ- ಎಲೈ ತಂದೆಯೆ! ಕಷ್ಟ ಸುಖಗಳು ಶಾಶ್ವತವಲ್ಲ. ನಾವು ಅನುಭವಿಸಿರುವ ಕಷ್ಟಗಳಿಗಿಂತಲೂ ಹೆಚ್ಚಾದ ಕಷ್ಟವು ಯಾವುದೂ ಇಲ್ಲ. ಮರಣವನ್ನು ಏತಕ್ಕೆ ಬಯಸುತ್ತಿಯೆ? ಹತ್ತು ವರುಷ ವಿಯೋಗಾನಂತರ ನಾವು ಒಬ್ಬರನ್ನೊಬ್ಬರು ನೋಡುವ ಸಂಭವವುಂಟಾದುದರಿಂದಲೇ, ನಮ್ಮ ಕಷ್ಟಗಳಿಗೆ ಅವಸಾನ ಸಮಿಾಪಿಸಿರುವುದೆಂದು ತೋರುವುದಿಲ್ಲವೆ? ನಮ್ಮನ್ನು ಇಂಥ ಅವಸ್ಥೆಗೆ ಗುರಿಮಾಡಿದವರಲ್ಲಿ, ಕೆಲವರು ಲೋಕಾಂತರವನ್ನು ಹೊಂದಿರಬಹುದು; ಮತ್ತೆ ಕೆಲವರಿಗೆ ನರಕದಲ್ಲಿ ಅನಿರ್ವಚನೀಯವಾದ ಯಾತನಾಸ್ಥಳಗಳು ಸಿದ್ದವಾಗುತ್ತಲಿರಬಹುದು. ಮರಣವನ್ನು ಬಯಸಬೇಡ. ಈ ಲೋಕಸುಖವನ್ನು ಇನ್ನೂ ಕೆಲವು ವರುಷ ನಾವು ಅನುಭವಿಸಬೇಕಾಗಿರುವದು. ಕಷ್ಟದ ಸರದಿಯು ಮುಗಿದುಹೋಯಿತು; ಸೌಖ್ಯದ ಸರದಿಯು ಬರುತ್ತಿದೆ. ಇದುವರೆಗೂ ಕೃಷ್ಣ ಪಕ್ಷದಲ್ಲಿದ್ದೆವು; ಈಗ ಶುಕ್ಲಪಕ್ಷವು ನಮ್ಮನ್ನು ಎದುರುನೋಡುತ್ತಲಿದೆ.
ತಂದೆ- ನನ್ನ ಪ್ರಿಯಳಾದ ಮಗುವೆ! ನಿನ್ನ ಅವಸ್ಥೆಯನ್ನು ನೀನು ಸಂಪೂರ್ಣವಾಗಿ ತಿಳಿದುಕೊಂಡಂತೆ ತೋರುವುದಿಲ್ಲ. ಈಗ ತಾನೆ ದೈವಾಧೀನದಿಂದ ರೋಗವೆಂಬ ಮೃತ್ಯುವಿನಿಂದ ನೀನು ಬಿಡುಗಡೆ ಮಾಡಲ್ಪಟ್ಟಿರುವೆ. ಆದರೆ, ಈ ಮೃತ್ಯುವು ನಿನ್ನನ್ನು ಪರಿಗ್ರಹಿಸಿದ್ದರೆ ನಾನು ವಿಶೇಷ ಸಂತಾಪ ಪಡುತ್ತಿರಲಿಲ್ಲ. ಮೃತ್ಯುವಿಗಿಂತಲೂ ಹೆಚ್ಚಾದ ಕ್ರೌರ್ಯವುಳ್ಳ ದುರಾತ್ಮನೊ