ಪುಟ:ಪರಂತಪ ವಿಜಯ ೨.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೦

ಪರಂತಪ ವಿಜಯ


ದನು. ಆ ಕ್ಷಣದಲ್ಲಿಯೇ, ನನಗೆ ಮಾತ್ರ ತಿಳಿದಿರತಕ್ಕ ಒಂದು ಮಾರ್ಗದಿಂದ ನಾನು ಇಲ್ಲಿಗೆ ಬಂದಿರುವೆನು. ಅವನ ಅಪರಾಧಕ್ಕೆ ಪ್ರತೀಕಾರವನ್ನು ನೀನು ಮಾಡುವುದಾದರೆ, ನಿನಗೆ ಈ ಕಾರಾಗೃಹವಾಸವನ್ನು ತಪ್ಪಿಸುವೆನು.
ಪರಂತಪ- ನನಗೆ ಬಿಡುಗಡೆಯಾದ ಮೇಲೆ ಶಂಬರನಿಗೆ ಒಂದು ದಿವಸವೂ ಆಯುಸ್ಸು ಇರುವುದಿಲ್ಲವೆಂದು ನೀನು ದೃಢನಾಗಿ ನಂಬಬಹುದು. ಈ ದುರಾತ್ಮನು ಇನ್ನೂ ಎಷ್ಟೋ ಅಕೃತ್ಯಗಳನ್ನು ಮಾಡಿರುವನು, ಅವುಗಳಿಗೆ ಪ್ರತೀಕಾರವನ್ನು ಮಾಡಿಸುವದಕ್ಕೋಸ್ಕರ ದೇವರು ಸನ್ನದ್ಧನಾಗಿರುವನೆಂದು ತೋರುವ ಸಂದರ್ಭಗಳು ಉಂಟಾಗುತ್ತವೆ.
ಕಾವಲುಗಾರ- ಹಾಗಾದರೆ ಹೇಳುವೆನು -ಕೇಳು. ಕಳೆದ ಹತ್ತು ವರ್ಷಗಳಿಂದ ನಾನು ಸುಮಿತ್ರನ ಸೇವಕನಾಗಿದ್ದೆನು. ಅವನು ಕಾವಮೋಹಿನಿಯ ತಂದೆಯನ್ನು ಇಲ್ಲಿ ಒಂದು ಕಾರಾಗೃಹದಲ್ಲಿಟ್ಟು, ಅವನ ಮೇಲೆ ನನ್ನನ್ನು ಪಹರೆ ಹಾಕಿದ್ದನು. ಸುಮಿತ್ರನು ನನಗೆ ತುಂಬ ಸಂಬಳವನ್ನು ಕೊಡುತ್ತಿದ್ದನು. ಈ ಸಂಬಳದಲ್ಲಿ ಒಂದು ಭಾಗವನ್ನು ಕೈದಿಯ ಪೋಷಣೆಗಾಗಿ ನಾನು ವಿನಿಯೋಗಿಸುತ್ತಿದ್ದೆನು. ಅವನನ್ನು ಎಷ್ಟು ದಯೆಯಿಂದ ನಾನು ಕಾಣುತ್ತಿದ್ದೆನೋ ಅದು ನಿನಗೆ ಅವನಿಂದಲೇ ತಿಳಿಯುವುದು.
ಪರಂತಪ- ಅವನನ್ನು ನಾನು ಬಲ್ಲೆನೋ?
ಕಾವಲುಗಾರ- ನೀನು ಅವನನ್ನು ನೋಡಿಲ್ಲ.
ಪರಂತಪ- ಅವನು ಎಲ್ಲಿ ಇದ್ದಾನೆ ?
ಕಾವಲುಗಾರ-ಅವನಿಗೆ ಕೈಕಾಲು ಬೇಡಿಗಳನ್ನು ಹಾಕಿ, ಇಂತಹುದೆ ಒಂದು ಗುಹೆಯಲ್ಲಿ ಸುಮಿತ್ರನು ಅವನನ್ನು ಇಟ್ಟಿದ್ದನು. ಸುಮಿತ್ರನು ಸತ್ತ ಮೇಲೆ, ಶಂಬರನು ಅವನ ಬಂಧವಿಮೋಚನೆಯನ್ನು ಮಾಡಿ, ಅವನ ಸಹಾಯದಿಂದ ಕಾಮಮೋಹಿನಿಯನ್ನು ಪಾಣಿಗ್ರಹಣ ಮಾಡಿಕೊಳ್ಳಬೇಕೆಂದು ಇದ್ದಾನೆ.
ಪರಂತಪ-ಏನು ಹೇಳಿದೆ ? ಈ ಪಾಪಿಯನ್ನು ಅವಳು ಮದುವೆ ಮಾಡಿಕೊಳ್ಳುವಳೋ? ಎಂದಿಗೂ ಮಾಡಿಕೊಳ್ಳಲಾರಳು.