ಪುಟ:ಪರಂತಪ ವಿಜಯ ೨.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೨

ಪರಂತಪ ವಿಜಯ


ಬಂಧಮೋಕ್ಷವನ್ನು ಅಪೇಕ್ಷಿಸುವೆನು. ಅವನಿಗೆ ಬಂಧವಿಮೋಚನೆಯನ್ನು ಮಾಡಿದ ಕೂಡಲೆ, ಕಾರ್ಯಾರ್ಥವಾಗಿ ಅವನನ್ನು ಈ ರತ್ನಾಕರದಿಂದ ಹೊರಕ್ಕೆ ಕಳುಹಿಸಿಕೊಡುವೆನು, ತರುವಾಯ ವಿವಾಹ ಕಾಲವು ಸಮೀಪಿಸುವುದರೊಳಗಾಗಿಯೇ ಈ ದೇಹವನ್ನು ಬಿಡುವೆನು.” ಎಂದು ನಿಶ್ಚಯಿಸಿಕೊಂಡು, ದುರ್ಮತಿಯನ್ನು ಕುರಿತು “ಎಲೈ ದುರ್ಮತಿಯೆ! ನಿನ್ನ ಇಷ್ಟ ಪ್ರಕಾರ ಕೆಲಸವನ್ನು ನಡೆಸಿಕೊ. ಆದರೆ, ನನ್ನ ತಂದೆಗೆ ಬಂಧ ವಿಮೋಚನೆಯನ್ನು ಮಾಡಿ ಆತನಿಗೆ ಮಾಡತಕ್ಕ ಸಹಾಯವನ್ನು ಮಾಡಿ ಈ ರತ್ನಾಕರದಿಂದ ಆಚೆಗೆ ಹೊರಡಿಸಿದರೆ, ನಾನು ನಿನ್ನ ಮಾತಿಗೆ ಒಳಪಡುವೆನು. ಆತನ ಎದುರಿಗೆ ಈ ಪುನರ್ವಿವಾಹಕ್ಕೆ ಒಪ್ಪುವುದು ನನಗೆ ಬಹಳ ಕ್ಲೇಶಕರವಾಗಿದೆ!” ಎಂದು ಹೇಳುತ್ತಿರುವಾಗಲೇ, ಇವುಗಳನ್ನು ಏಕಾಂತವಾಗಿ ಕೇಳುತ್ತಿದ್ದ ಶಂಬರನು ಎದುರಿಗೆ ಬಂದು ನಿಂತುಕೊಂಡು "ಎಲೈ ಪ್ರಾಣಕಾಂತೆಯೆ! ನಿನ್ನ ಇಷ್ಟವಿದ್ದಂತೆ ನಡೆಸುವುದರಲ್ಲಿ ಯಾವ ಸಂಶಯವೂ ಇಲ್ಲ. ಈಗಲೇ ನಿನ್ನ ಮನೋರಥವನ್ನು ನಡೆಸುವೆನು. ” ಎಂದು ಹೇಳಿ, ಈಕೆಯ ತಂದೆಯನ್ನು ಕರೆಯಿಸಿ, ಅವನ ಕೈಕಾಲು ಬೇಡಿಗಳನ್ನು ತೆಗೆಯಿಸಿ, ಆತನಿಗೆ ಒಂದು ಲಕ್ಷ ಪೌನು ನೋಟುಗಳನ್ನು ಕೊಟ್ಟು, ನಿನ್ನ ಇಷ್ಟ ಬಂದ ಕಡೆಗೆ ಹೋಗಬಹುದೆಂದು ಆಜ್ಞೆಯನ್ನು ಮಾಡಿದನು. ಅವನು ಶಂಖರನು ಕೊಟ್ಟ ನೋಟುಗಳನ್ನು ಅವನಿಗೆ ವಾಪಸುಮಾಡಿ “ಅಯ್ಯಾ! ಶಂಬರನೆ! ನೀನು ನನ್ನ ಬಂಧ ವಿಮೋಚನೆಯನ್ನು ಮಾಡಿದ್ದಕ್ಕೆ ನಾನು ಬಹಳ ಕೃತಜ್ಞನಾಗಿರುವೆನು. ದ್ರವ್ಯದ ಮೇಲಿನ ಆಸೆ ನನಗಿಲ್ಲ. ಇದನ್ನು ನೀನೇ ಇಟ್ಟುಕೊ. ನಾನು ಪುನಃ ನಿನ್ನನ್ನು ಕಾಣುವೆನು. ನೀನು ಈಗಲಾದರೂ ದುರ್ಮಾರ್ಗ ಪ್ರವರ್ತನೆಯನ್ನು ಬಿಟ್ಟು ಪರಸ್ತ್ರೀಯಾದ ಕಾಮಮೋಹಿನಿಯಲ್ಲಿ ಆಕೆಯನ್ನು ತೊರೆದು ಸುಖವಾಗಿ ಬದುಕು, ಹಾಗಿಲ್ಲದೆ ಈ ಅಗಮ್ಯಾಗಮನದಲ್ಲಿ ಆಸಕ್ತಿಯನ್ನು ಬಿಡದಿದ್ದರೆ, ನಿನ್ನ ದುಷ್ಕರ್ಮದ ಫಲವನ್ನು ನೀನು ಅನುಭವಿಸಬೇಕಾಗುತ್ತದೆ. ನಾನು ಹೋಗಿಬರುವೆನು.” ಎಂದು ಹೇಳಿ, ರತ್ನಾಕರವನ್ನು ಬಿಟ್ಟು ಕಲ್ಯಾಣಪುರದ ಮಾರ್ಗವನ್ನು ಅನುಸರಿಸಿದನು.
ಶಂಬರನು, ವಿವಾಹಮಹೋತ್ಸವಕ್ಕೆ ಬೇಕಾದ ಸಲಕರಣೆಗಳನ್ನೆಲ್ಲ ಬಹಳ ಉತ್ಸಾಹದಿಂದ ಅಣಿಗೊಳಿಸುತ್ತಿದ್ದನು. ಅಷ್ಟರಲ್ಲಿಯೇ ಏಕಾಂತ