ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೧೭
೧೩೩

ವಾದ ಸುರಂಗಮಾರ್ಗವನ್ನು ಪ್ರವೇಶಿಸಿದ್ದ ಮಂಜೀರಕನು ಏಕಾಂತವಾಗಿ ಕಾಮಮೋಹಿನಿಯ ಕೊಟ್ಟಡಿಯ ಬಳಿಗೆ ಬಂದು, ಅಲ್ಲಿ ಔದಾಸೀನ್ಯದಿಂದ ಬೀಟು ತಿರುಗುತ್ತಿದ್ದವನ ಕೈಯಿಂದ ಆಯುಧವನ್ನು ಕಿತ್ತುಕೊಂಡು, ಅವನ ಬಾಯಿಗೆ ಬಟ್ಟೆಯನ್ನು ತುರುಕಿ, ಕೈ ಕಾಲುಗಳನ್ನು ಕಟ್ಟಿ ಒಂದು ಮೂಲೆಯಲ್ಲಿ ಕೆಡವಿ, ಅಲ್ಲಿಂದ ಕಾಮಮೋಹಿನಿಯ ಕೊಟ್ಟಡಿಯನ್ನು ಪ್ರವೇಶಿಸಲು, ದುರ್ಮತಿಯು ಗಲಾಟೆ ಮಾಡುವುದಕ್ಕೆ ಉಪಕ್ರಮಿಸಿದಳು. ಅವಳಿಗೂ ಬಾಯಿಗೆ ಬಟ್ಟೆಯನ್ನು ತುರುಕಿ, ಕೈಕಾಲುಗಳನ್ನು ಕಟ್ಟಿಹಾಕಿ, ತನ್ನ ಜತೆಯಲ್ಲಿ ಕರೆದುಕೊಂಡು ಹೋಗಿದ್ದ ಇಬ್ಬರು ಶೂರರನ್ನು ಬಾಗಿಲಲ್ಲಿ ನಿಲ್ಲಿಸಿ, ಪರಂತಪ ಸಮರಸಿಂಹರ ವಿನಾ ಇನ್ನಾರು ಬಂದಾಗ ಗುಂಡಿನಿಂದ ಹೊಡೆದು ಕೊಲ್ಲಬಹುದೆಂದು ಆಜ್ಞೆ ಮಾಡಿ, ಕಾಮಮೋಹಿನಿಯನ್ನು ಕುರಿತು “ಎಲೈ ಕಾಮಮೋಹಿನಿಯೆ! ನಿನ್ನ ಕಷ್ಟವು ಪರಿಹಾರವಾಯಿತು. ಈ ದುರಾತ್ಮನಾದ ಶಂಬರನು ಪರಂತಪ ಸತ್ತನೆಂಬುದಾಗಿ ಹುಟ್ಟಿಸಿರುವ ವದಂತಿಯು ಸುಳ್ಳು. ಪರಂತಪನು ಈ ಕಟ್ಟಡದಲ್ಲಿಯೇ ಇರುವನು. ಶಂಬರನ ಆಯುಸ್ಸು ಮುಗಿಯುತ್ತ ಬಂದಿತು. ನೀನು ಭಯಪಡಬೇಡ, ಪಾತಿವ್ರತ್ಯ ಸಂರಕ್ಷಣೆಗೋಸ್ಕರ ದೇಹವನ್ನು ಬಿಡಬೇಕೆಂದು ಸಂಪಾದಿಸಿಟ್ಟು ಕೊಂಡಿರತಕ್ಕ ವಿಷವನ್ನು ಬೀಸಾಕು. ಶೀಘ್ರದಲ್ಲಿಯೇ ನಿನ್ನ ಪಾತಿವ್ರತ್ಯಕ್ಕೆ ಅನುರೂಪವಾದ ಸೌಖ್ಯವನ್ನು ಹೊಂದುವೆ. ಶಂಬರನ ಕಾವಲುಗಾರನನ್ನು ಮುಷ್ಕೀಕಟ್ಟಿ ಕೆಡವಿರುತ್ತೇನೆ. ಬಾಗಿಲಿನಲ್ಲಿ ನಿಲ್ಲಿಸಲ್ಪಟ್ಟಿರುವ ಕಾವಲುಗಾರರು ಪರಂತಪನ ಕಡೆಯವರು. ಇನ್ನು ನಾನು ಮಾಡತಕ್ಕ ಕೆಲಸವು ಸ್ಪಲ್ಪವಿರುವುದು. ಒಂದು ಅರ್ಧ ಘಂಟೆಯ ಹೊತ್ತು ಸ್ಥೈರ್ಯವನ್ನು ಅವಲಂಬಿಸಿ ಇಲ್ಲಿಯೇ ಇರು. ಪರಂತಪನನ್ನು ಕರೆದುಕೊಂಡು ನಾನು ಜಾಗ್ರತೆಯಾಗಿ ಬರುವೆನು.” ಎಂದು ಹೇಳಿ, ಪ್ರತ್ಯುತ್ತರವನ್ನೂ ಕೂಡ ನಿರೀಕ್ಷಿಸದೆ, ಸಮರಸಿಂಹ ಪರಂತಪರ ಬಳಿಗೆ ಹೋಗಿ, ಕಾಮಮೋಹಿನಿಗೆ ಅಪಾಯ ಬರದಂತೆ ಮಾಡಿರುವ ಬಂದೋಬಸ್ತನ್ನು ತಿಳಿಸಿ, ಸಮರಸಿಂಹನನ್ನು ಕುರಿತು “ಅಯ್ಯಾ! ಸಮರಸಿಂಹ! ಈ ಕಿರಾತನು ಈಗತಾನೆ ಅರ್ಥಪರನೆಂಬ ಒಬ್ಬ ಲಾಯರನ್ನು ಖೂನಿಮಾಡಿರುವನು. ಈಗ ಇವನನ್ನು ದಸ್ತಗಿರಿ ಮಾಡಬೇಕು. ಹೀಗೆ ಮಾಡುವುದಕ್ಕೆ ಮುಂಚೆ, ಈ ದುರ್ಗದ ನಾಲ್ಕು ಬಾ