ಪುಟ:ಪರಂತಪ ವಿಜಯ ೨.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧


ರಾತ್ರಿ ನಾನು ಆ ನೀಚನಾದ ದುರ್ಬುದ್ಧಿಯೊಡನೆ ದ್ಯೂತವಾಡಬೇಕೆಂದು ಸಂಕಲ್ಪಿಸಿರುವೆನಷ್ಟೆ : ಇದರಲ್ಲಿ ನಾನೇ ಗೆಲ್ಲಬಹುದೆಂಬ ಭರವಸವು ನನಗೆ ಸಂಪೂರ್ಣವಾಗಿರುವುದು. ಆದರೂ, ಜಯಾಪಜಯಗಳು ಪುಣ್ಯವಶ ವಾದುದರಿಂದ, ಅದನ್ನು ನಿರ್ಧರಿಸುವುದಕ್ಕಾಗುವುದಿಲ್ಲ. ಇದಲ್ಲದೆ, ಈ ದುರ್ಬುದ್ಧಿಯು ಬಹಳ ಕೃತಿಮವಾಗಿ ಆಟವಾಡತಕ್ಕವನು. ಇವನ ಕೃತಿಮವನ್ನು ಹೊರಪಡಿಸುವುದೂ ಕೂಡ ನನಗೆ ಮುಖ್ಯ ಕರ್ತವ್ಯವಾಗಿದೆ. ಒಂದುವೇಳೆ ಇವನ ಮೋಸವನ್ನು ಉದ್ಘಾಟಿಸಿದ ಕೂಡಲೆ ನಮ್ಮಿಬ್ಬರಿಗೂ ಕಲಹವುಂಟಾಗಬಹುದು. ಇದರಲ್ಲಿ ಅವನಿಗಾಗಲೀ ನನಗಾಗಲೀ ಅಪಾಯವೂ ಉಂಟಾಗಬಹುದು. ಹಾಗೇನಾದರೂ ಆಗುವ ಸಂದರ್ಭದಲ್ಲಿ, ಅಗ ನಿನ್ನಿಂದ ಆಗತಕ್ಕುದೊಂದು ಉಪಕಾರವಿರುವುದು. ಅದನ್ನು - ನೀನು ಮಾಡಬೇಕು.
ಪರಂತಪ -ನನ್ನಿಂದ ಏನು ಆಗಬೇಕಾದಾಗ್ಗೂ ಅದನ್ನು ನಾನು ಶಿರಸಾವಹಿಸಿ ಮಾಡುವುದರಲ್ಲಿ ಸಿದ್ಧನಾಗಿರುವೆನು : ಹೇಳು.
ಮಾಧವ-ಆ ನೀಚನು ತನ್ನನ್ನು ಸೋಲಿಸಿದವರನ್ನು ಕಠಾರಿ ಯಿಂದ ತಿವಿದು ಕೊಲ್ಲುವುದುಂಟು. ಹಾಗೆ ಅವನೇನಾದರೂ ನನ್ನನ್ನು ಕೊಲ್ಲುವುದಕ್ಕೆ ಯತ್ನಿಸಿ ನನಗೆ ಅಪಾಯ ಸಂಭವಿಸಿದ ಪಕ್ಷದಲ್ಲಿ, ಒಡ ನೆಯೇ ನನ್ನನ್ನು ಈ ನನ್ನ ವಾಸಗೃಹಕ್ಕೆ ಕರೆದುಕೊಂಡು ಬರಬೇಕು.
ಪರಂತಪ-ಅವಶ್ಯವಾಗಿ ಈ ಕೆಲಸ ಮಾಡುತ್ತೇನೆ.
ಮಾಧವ-ಬಹುಶಃ ಇವನು ನನ್ನನ್ನು ಕೊಲ್ಲಲಾರನು, ಒಂದು ವೇಳೆ ನನಗೆ ಪ್ರಾಣಹಾನಿಯುಂಟಾಗುವ ಸಂದರ್ಭದಲ್ಲಿ, ನೀನು ಮಾಡ ತಕ್ಕ ಕ್ರಮಗಳನ್ನು ಹೇಳುತ್ತೇನೆ ; ಕೇಳು. ನನ್ನ ಕೈ ಪೆಟ್ಟಿಗೆಯಲ್ಲಿ ನನ್ನ ಆಸ್ತಿಯ ವಿನಿಯೋಗದ ವಿಷಯದಲ್ಲಿ ಒಂದು ಉಯಲನ್ನು ಬರೆದು ಇಟ್ಟಿರುತ್ತೇನೆ. ನಾನು ಸತ್ತಪಕ್ಷದಲ್ಲಿ, ನನ್ನ ಶವವನ್ನು ನಮ್ಮ ಅಣ್ಣನ ವಶ ಮಾಡಬೇಕಲ್ಲದೆ, ಈ ಉಯಿಲೂ ಜಾರಿಗೆ ಬರುವಂತೆ ಮಾಡಬೇಕು. ನನ್ನ ಉತ್ತರಕ್ರಿಯಾದಿಗಳಿಗಾಗಿ ನನ್ನ ಕೈಪೆಟ್ಟಿಗೆಯಲ್ಲಿ ಬೇಕಾದಷ್ಟು ದ್ರವ್ಯವನ್ನು ಇಟ್ಟಿರುತ್ತೇನೆ.