೧೨
ಆದರೆ, ಈ ನಮ್ಮಗಳ ಆಟದ ವಿಷಯದಲ್ಲಾಗಲಿ-ನನ್ನ ಪ್ರಾಣರಕ್ಷಣೆಯ ವಿಷಯದಲ್ಲಾಗಲಿ-ನೀನು ಸ್ವಲ್ಪವೂ ಪ್ರವರ್ತಿಸಬೇಡ. ನಾನು ನಿನಗೆ ಹೇಳಿರುವ ಕಾರ್ಯಗಳನ್ನು ಮಾತ್ರ ಜಾಗ್ರತೆಯಿಂದ ನಡೆಯಿಸು. ಎಂದು ಹೇಳಿ, ಮಾಧವನು ದ್ಯೂತ ಗೃಹಕ್ಕೆ ಹೊರಟುಹೋದನು.
ಮಾಧವನು ಹೊರಟು ಹೋದಮೇಲೆ, ಪರಂತಪನ ಮನಸ್ಸಿನಲ್ಲಿ ಹೀಗೆ ಚಿತ್ರ ವಿಚಿತ್ರಗಳಾದ ಆಲೋಚನೆಗಳು ಅಂಕುರಿಸಿದವು. ಮಾಧವನು ಹುಚ್ಚನೆ ? ಎಂದಿಗೂ ಹುಚ್ಚನಂತೆ ತೋರುವುದಿಲ್ಲ. ಅಥವಾ, ದ್ಯೂತವೆಂಬುದು, ಅದರಲ್ಲಿ ಆಸಕ್ತರಾದವರಿಗೆ ಮಿತಿಮೀರಿದ ಒಂದು ವಿಧವಾದ ಹುಚ್ಚು ಹಿಡಿಸುವುದುಂಟು. ಇಂಥ ಉನ್ಮಾದವೆನಾದರೂ ಇವನಲ್ಲಿ ಉದ್ಭವಿಸಿರಬಹುದೆ ? ಅದನ್ನೂ ಹೇಳು ವುದಕ್ಕಾಗುವುದಿಲ್ಲ. ಏಕೆಂದರೆ-ಇವನ ಐಶ್ವರ್ಯವು ಅಪರಿಮಿತವಾಗಿರು ವುದರಿಂದ, ನೀಚಕೃತ್ಯದಿಂದ ಧನಾರ್ಜನೆಯನ್ನು ಮಾಡಬೇಕೆಂಬ ಅಭಿಲಾಷೆ ಯಿವನಲ್ಲುಂಟಾಗಿರಲಾರದು. ಇದಲ್ಲದೆ, ಇವನು ದ್ಯೂತಾಸಕ್ತನಾಗಿದ್ದಾಗ್ಗೂ, ಕಪಟದ್ಯೂತವನನ್ನಾಡಿ ಜನಗಳನ್ನು ಕೆಡಿಸತಕ್ಕವರಲ್ಲಿ ಇವನ ದ್ವೇಷವು ಅನ್ಯಾದೃಶವಾಗಿರುವುದನ್ನು ನೋಡಿದರೆ ಪರಮಾಶ್ಚರ್ಯವಾಗುವುದು. ಇವನಿಗೆ ಧರ್ಮದ್ಯೂತವಿಶಾರದನೆಂಬ ಬಿರುದು ಒಪ್ಪುವುದು, ಇವನು ಅಧರ್ಮ ದ್ಯೂತಾಸಕ್ತರನ್ನು ನಿಗ್ರಹಿಸುವುದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊನೆಗೆ ಪ್ರಾಣವನ್ನೂ ಕಳೆದುಕೊಳ್ಳುವುದರಲ್ಲಿ ಸಿದ್ಧನಾಗಿರುವನು.