ಆಹಾ ! ಇವನು ಲೋಕವಿಲಕ್ಷಣನಾವ ಮನುಷ್ಯನು. ಇವನ ಮಾತುಗಳಿಂದ, ದುರಾತ್ಮನಾದ ದುರ್ಬುದ್ಧಿಯು ಕಪಟ ದ್ಯೂತಾಸಕ್ತನೆಂಬುದಲ್ಲದೆ- ಘಾತುಕನಾಗಿಯೂ ಇರುವನೆಂದು ತಿಳಿಯಬರುವುದು. ಇದಲ್ಲದೆ, ಮಾಧವನು ಈ ರಾತ್ರಿಯ ದ್ಯೂತದಲ್ಲಿ ತನಗೇನಾದರೂ ಅಪಾಯ ಸಂಭವಿಸಬಹುದೆಂದು ಹೇಳಿರುವನು. ಆದುದರಿಂದ ಸರ್ವಪ್ರಯತ್ನದಿಂದಲೂ ಮಾಧವನಿಗೆ ಆ ವಿಪತ್ತನ್ನು ತಪ್ಪಿಸಬೇಕಲ್ಲದೆ, ಘಾತುಕನಾದ ಆ ದುರ್ಬುದ್ಧಿಯ ಸೊಕ್ಕನ್ನಡಗಿಸಿ ಅವನನ್ನು ಯಮಾಲಯಕ್ಕೆ ಕಳುಹಿಸಬೇಕಾಗಿರುವುದು. ಒಳ್ಳೆಯದಿರಲಿ ; ಇದಕ್ಕೆ ತಕ್ಕ ಕೃಷಿಯನ್ನು ಮಾಡುವೆನು.
ಹೀಗೆ ತನ್ನ ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ಸಮೀಪದಲ್ಲಿದ್ದ ಭೋಜನಶಾಲೆಯಲ್ಲಿ ಭೋಜನವನ್ನು ತೀರಿಸಿಕೊಂಡು, ಪರಂತಪನು ದ್ಯೂತ ಗೃಹಕ್ಕೆ ಪ್ರವೇಶಿಸಿದನು. ಅಲ್ಲಿ ದುರ್ಬುದ್ಧಿಯೊಡನೆ ಮಾಧವನು ದ್ಯೂತವಾಡುವುದಕ್ಕೆ ಸಿದ್ಧನಾಗಿದ್ದನು. ದುರ್ಬುದ್ಧಿಯ ಕಡೆಯ ಕೆಲವು ಜನಗಳೂ, ಉದಾಸೀನರಾದ ಕೆಲವು ಜನಗಳೂ ಸೇರಿ ಇದ್ದರು. ಕೂಡಲೆ ಆಟಕ್ಕೆ ಉಪಕ್ರಮವಾಯಿತು. ಇತ್ತಲಾಗಿ, ಪರಂತಪನು ಬಾರುಮಾಡಲ್ಪಟ್ಟ ರಿವಾಲ್ವರನ್ನು ಸಿದ್ಧಪಡಿಸಿಕೊಂಡು ದ್ಯೂತವಾಡುತ್ತಿರುವ ಅವರಿಬ್ಬರ ಸಂಭಾಷಣೆಯನ್ನು ಕೇಳುತ್ತ ಸ್ವಲ್ಪ ದೂರದಲ್ಲಿ ಕುಳಿತಿದ್ದನು. ಮಾಧವನಾದರೋ, ಆಗಿನ ದ್ಯೂತದಲ್ಲಿ ದುರ್ಬುದ್ಧಿಯ ಮೋಸಕ್ಕೆ ಸ್ವಲ್ಪವೂ ಅವಕಾಶಕೊಡದೆ, ಪ್ರತಿಯೊಂದು ಆಟವನ್ನೂ ಅಲ್ಲಿದ್ದ ಸಮಸ್ತ ಜನರಿಗೂ ಸಮ್ಮತವಾಗಿರುವಂತೆ ಆಡುತ್ತಿದ್ದನು. ಇವನ ಕೌಶಲ್ಯದಿಂದಲೋ, ಅಥವಾ ದೈವಗತಿಯಿಂದಲೋ, ಜಯಲಕ್ಷ್ಮಿಯು ಇವನನ್ನೇ ವರಿಸಿದಳು. ಅನೇಕ ಜನಗಳಿಗೆ ಮೋಸಪಡಿಸಿ ಅಧರ್ಮದಿಂದ ಗೆದ್ದಿದ್ದ ಆ ದುರ್ಬುದ್ಧಿಯ ದ್ರವ್ಯದಲ್ಲಿ ಅರ್ಧ ಭಾಗವನ್ನು ಮಾಧವನು ಗೆದ್ದನು. ಒಡನೆಯೆ ದುರ್ಬುದ್ಧಿಗೆ ಸಂತಾಪವೂ ಮಾಧವನ ಮೇಲೆ ಕ್ರೋಧವೂ ಹೆಚ್ಚುತಬಂದುವು.
ದುರ್ಬುದ್ಧಿ-(ಮಾಧವನ್ನು ಕುರಿತು) ಅಯ್ಯಾ ! ಮಾಧವನೆ : ಈ ದಿನ ಜಯಲಕ್ಷ್ಮಿಯು ನಿನ್ನ ಅಧೀನಳಾಗಿರುವಳು. ಆದರೂ ಚಿಂತೆಯಿಲ್ಲ. ಈಗ ನನ್ನ ಆಸ್ತಿಯಲ್ಲಿ ಅರ್ಧಭಾಗವು ನಿನಗೆ ಸೇರಿಹೋಯಿತು. ಇನ್ನು ಮುಂದೆ ಆಡಬೇಕಾದರೆ, ಸೋತವರು ಗೆದ್ದವರಿಗೆ ತನ್ನ ಸರ್ವಸ್ವ