ಪುಟ:ಪರಂತಪ ವಿಜಯ ೨.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ಪರಂತಪ ವಿಜಯ


ವನ್ನೂ ಒಪ್ಪಿಸಿಬಿಡಬೇಕು. ಈ ನಿರ್ಣಯಕ್ಕೆ ಒಪ್ಪುವುದಾದರೆ, ಮುಂದಕ್ಕೆ ಆಡೋಣ ! ಇಲ್ಲವಾದರೆ ಈ ನಮ್ಮ ದ್ಯೂತವು ಇಷ್ಟಕ್ಕೇ ಸಮಾಪ್ತವಾಗಲಿ.
ಮಾಧವ-(ಸ್ಪಲ್ಪ ಯೋಚಿಸಿ) ಅಯ್ಯಾ ! ದುರ್ಬುದ್ಧಿಯೆ ! ನೀನು ಹೇಳುವುದು ನನಗೆ ಒಪ್ಪಿತು. ಮುಖ್ಯವಾಗಿ ಈ ದ್ಯೂತವೆಂಬುದೇ ಕೆಟ್ಟದ್ದು, ಆದರೂ, ಈ ಕೆಲಸದಲ್ಲಿ ಪ್ರವರ್ತಿಸಿದವರು ಅದರಿಂದಲೇ ಪೂರ್ಣವಾಗಿ ಕೆಡಬೇಕು ; ಅಥವಾ ಸಂಪೂರ್ಣವಾಗಿ ಅದರಿಂದಲೇ ಬದುಕಬೇಕು. ಈಗ ನನ್ನ ಧನವು ನಿನ್ನ ಧನಕ್ಕಿಂತಲೂ ಶತಾಂಶ ಅಧಿಕವಾಗಿರುವುದು. ಆದಾಗ್ಗೂ ಚಿಂತೆಯಿಲ್ಲ. ನೀನು ಗೆದ್ದ ಪಕ್ಷದಲ್ಲಿ, ಈಗ ನಿನ್ನಿಂದ ನಾನು ಗೆದ್ದಿರುವ ದ್ರವ್ಯದೊಡನೆ ನನ್ನ ಸರ್ವಸ್ವವನ್ನೂ ನಿನಗೆ ಒಪ್ಪಿಸಿ, ನಾನು ದೇಶಭ್ರಷ್ಟನಾಗಿ ಹೋಗುತ್ತೇನೆ. ಅಥವಾ ನಾನು ಗೆದ್ದ ಪಕ್ಷದಲ್ಲಿ, ಉಳಿದ ನಿನ್ನ ಆಸ್ತಿಯೆಲ್ಲವೂ ನನಗೆ ಸೇರಲಿ.
ಇದಕ್ಕೆ ಇಬ್ಬರೂ ಒಪ್ಪಿದರು. ಅದೇ ಅರ್ಥವನ್ನು ಕುರಿತು, ಅಲ್ಲಿದ್ದ ಸಭಿಕರ ಅನುಮತಿಯಿಂದ ಒಂದು ನಿರ್ಣಯ ಪತ್ರಿಕೆಯು ಬರೆಯಲ್ಪಟ್ಟಿತು. ಅದಕ್ಕೆ ಅಲ್ಲಿದ್ದ ಸಮಸ್ತ ಜನರೂ ಸ್ವಹಸ್ತ ಚಿಹ್ನೆಗಳನ್ನು ಹಾಕಿದರು. ಒಡನೆಯೇ ಆಟಕ್ಕೆ ಉಪಕ್ರಮವಾಯಿತು. ಆಗಲೂ ದೈವಗತಿಯಿಂದ ಮಾಧವನಿಗೇ ಜಯವಾಯಿತು. ಕೂಡಲೇ ದುರ್ಬುದ್ಧಿಯು ಅನಿರ್ವಚನೀಯವಾದ ಸಂತಾಪಕ್ಕೆ ಪರವಶನಾಗಿ, ಕೆಲವು ನಿಮಿಷಗಳವರೆಗೂ ಸ್ತಬ್ದನಾಗಿದ್ದು, ಸ್ವಲ್ಪ ಹೊತ್ತಿನಮೇಲೆ ಚೇತರಿಸಿಕೊಂಡು, ಮಾಧವನನ್ನು ಕುರಿತು "ಎಲಾ ದುರಾತ್ಮನಾದ ಮಾಧವನೆ ! ನೀನು ಬಹಳ ವಂಚಕನು. ನಾನಾದರೋ, ಅನೇಕಲಕ್ಷ ಜನಗಳೊಡನೆ ದ್ಯೂತವಾಡಿದವನು; ಆದರೂ ಇದು ವರೆಗೂ ಯಾರಿಗೂ ಸೋತವನಲ್ಲ. ಆದರೆ, ನೀನು ಯಾವದೋ ಒಂದು ವಿಧವಾದ ಚಮತ್ಕಾರದಿಂದ ನನ್ನನ್ನು ವಂಚಿಸಿ ಅಧರ್ಮದ್ಯೂತದಿಂದ ಈ ರೀತಿಯಾಗಿ ನನ್ನನ್ನು ಗೆದ್ದಿರುವಂತೆ ನನಗೆ ಸಂಶಯವುಂಟಾಗಿರುವುದು. ಆದುದರಿಂದ, ಈ ಆಟವು ನನಗೆ ಸರ್ವಥಾ ಸಮರ್ಪಕವಲ್ಲ. ನೀನು ಗೆದ್ದಿರುವುದರಲ್ಲಿ ಯಾವುದನ್ನೂ ನಿನಗೆ ನಾನು ಕೊಡತಕ್ಕವನಲ್ಲ.” ಎಂದನು.
ಮಾಧವ-ಎಲಾ ನೀಚನೆ ! ನಿನ್ನ ಹೆಸರಿಗೆ ಅನುರೂಪವಾದ ಮಾತುಗಳನ್ನಾಡಿದೆ. ನಾನು ವಂಚಕನೆಂಬುದನ್ನೂ, ಅಧರ್ಮದಿಂದ ಆಡತಕ್ಕವ