ಪುಟ:ಪರಂತಪ ವಿಜಯ ೨.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭



ಅಧ್ಯಾಯ ೩


ಪರಂತಪ- ಅವನ ಪ್ರಹಾರದಿಂದ ನೀನು ಮೂರ್ಛಿತನಾಗಿ ಕೆಳಗೆ ಬೀಳುವುದರೊಳಗಾಗಿಯೇ, ಅವನ ಶರೀರವು ಸಹಸ್ರ ಪ್ರಕಾರವಾಗಿ ಛೇದಿಸಿ ಉರುಳಿಸಲ್ಪಟ್ಟಿತು. ನಿನಗೆ ಉಂಟಾದ ಮೂರ್ಛೆಯೊಡನೆಯೇ, ಅವನಿಗೆ ದೀರ್ಘನಿದ್ರೆ ಪ್ರಾಪ್ತವಾಯಿತು. ಈಗ ಅವನು ತನ್ನ ದುಷ್ಕೃತ್ಯಗಳಿಗೆ ತಕ್ಕ ಶಿಕ್ಷೆಯನ್ನು ಯಮಪುರಿಯಲ್ಲಿ ಅನುಭವಿಸುತ್ತಿರುವನು.
ಮಾಧವ-ಹೀಗೆಯೇ ಆಗಬಹುದೆಂದು ನಾನು ಮೊದಲೇ ಭಾವಿಸಿದ್ದೆನು. ದೈವಾಧೀನದಿಂದ ನನ್ನ ಭಾವನೆಯಂತೆಯೇ ನಡೆಯಿತು. ಅಧರ್ಮ ದ್ಯೂತದಿಂದ ಅನೇಕ ಕುಟುಂಬಗಳನ್ನು ಹಾಳುಮಾಡಿದ ಈ ದುರಾತ್ಮನ ಪಾಪಕೃತ್ಯಕ್ಕೆ ತಕ್ಕ ಪ್ರತಿಫಲವನ್ನು ತೋರಿಸಿ ಈ ನೀಚನನ್ನು ನಿಗ್ರಹಿಸಬೇಕೆಂಬ ನನ್ನ ಸಂಕಲ್ಪವು ದೈವಗತಿಯಿಂದ ನೆರವೇರಿತು. ಅವನ ದುಷ್ಕೃತ್ಯಕ್ಕೆ ಈ ಶಿಕ್ಷೆಯ ಕೂಡ ಅಲ್ಪವಾದುದು. ಅದು ಹಾಗಿರಲಿ; ಒಬ್ಬ ವೈದ್ಯನನ್ನು ಕರೆಯಿಸು.
ಪರಂತಪ -ಅಪ್ಪಣೆ.
   ಹೊರಗೆ ಹೋಗಿ, ಪೂರ್ವದಲ್ಲಿಯೇ ತಾನು ಕರೆಸಿಟ್ಟಿದ್ದ ಜೀವಾನಂದನೆಂಬ ವೈದ್ಯನೊಡನೆ ಬಂದು, ಅಲ್ಲಿದ್ದವರನ್ನೆಲ್ಲ ಹೊರಗೆ ಕಳುಹಿಸಿದನು.
ಮಾಧವ - ವೈದ್ಯನನ್ನು ಕುರಿತು) ಅಯ್ಯಾ ! ಚಿಕಿತ್ಸಕನೆ ನನಗೆ ಬಿದ್ದಿರುವ ಪ್ರಹಾರವನ್ನು ಚೆನ್ನಾಗಿ ಪರೀಕ್ಷಿಸು. ನಾನು ಇನ್ನೆಷ್ಟು ನಿಮಿಷ ಗಳವರೆಗೆ ಬದುಕಿರಬಹುದು ?-ಹೇಳು.
ಜೀವಾನಂದ-(ಅವನನ್ನು ಚೆನ್ನಾಗಿ ಪರೀಕ್ಷಿಸಿ ನೋಡಿ) ಅಯ್ಯಾ ! ಮಾಧವನೆ ! ನಿನಗೆ ಸಂಭವಿಸಿರುವ ಅಪಾಯವು ಬಹಳ ಪ್ರಮಾದಕರವಾಗಿರುವುದು.
ಮಾಧವ-ಇದು ನನಗೆ ಮೊದಲೇ ಗೊತ್ತಾಗಿದ್ದಿತು. ಹುಟ್ಟಿದವರು ಎಂದಿಗಾದರೂ ಸಾಯಲೇ ಬೇಕು. ಸಾಯುವೆನೆಂಬ ವ್ಯಸನವು ಲೇಶ ಮಾತ್ರವೂ ನನಗಿಲ್ಲ. ಆದರೆ, ನನ್ನ ಆಸ್ತಿಯು ಅಪರಿಮಿತವಾಗಿರುವುದರಿಂದ, ನಾನು ಸಾಯುವಷ್ಟರೊಳಗಾಗಿ ಅದೆಲ್ಲವೂ ಸತ್ಪಾತ್ರದಲ್ಲಿ ವಿನಿಯೋಗವಾಗುವಂತೆ ಮಾಡಬೇಕೆಂಬ ಅಭಿಲಾಷೆಯು ನನಗೆ ಬಹಳವಾಗಿರು