ಪುಟ:ಪರಂತಪ ವಿಜಯ ೨.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಪರಂತಪ ವಿಜಯ


ವುದು. ಇನ್ನು ಎಷ್ಟು ಹೊತ್ತಿನವರೆಗೆ ನಾನು ಬದುಕಿರಬಹುದು ? ಅದನ್ನು ಭಯಪಡದೆ ಧೈರ್ಯವಾಗಿ ಹೇಳು.
ಜೀವಾನಂದ - ಅಯ್ಯಾ : ಮಾಧವನೆ ! ನಿನ್ನ ಅವಸ್ಥೆಯನ್ನು ನೋಡಿದರೆ, ಇನ್ನು ಅರ್ಧಘಂಟೆಯೊಳಗಾಗಿಯೇ ನಿನ್ನ ಪ್ರಾಣವು ಉತೃಮಿಸಿ ಹೋಗುವಂತೆ ತೋರುವುದು. ಆದರೂ, ನನ್ನ ಚಿಕಿತ್ಸಾ ಶಕ್ತಿಯಿಂದ ಇನ್ನು ಆರುಘಂಟೆಗಳ ಕಾಲ ನಿನ್ನನ್ನು ಬದುಕಿಸುವುದು ಸಾಧ್ಯವೆಂದು ತೋರುವುದು.
ಮಾಧವ-ಅಷ್ಟು ಮಾತ್ರವಾದರೆ ಸಾಕು. ಅಷ್ಟರೊಳಗೆ ನನ್ನ ಅಪರಿಮಿತವಾದ ಧನವೆಲ್ಲವನ್ನೂ ವಿನಿಯೋಗಿಸಬಹುದು. (ಪರಂತಪನನ್ನು ನೋಡಿ) ಅಯ್ಯಾ! ಪ್ರಿಯ ಮಿತ್ರನಾದ ಪರಂತಪನೆ! ನನ್ನ ಜೇಬಿನಲ್ಲಿ ಹತ್ತು ಸಾವಿರ ವರಹಾಗಳನ್ನು ಬಾಳ ಬಹುದಾದ ರತ್ನದ ಪದಕವೊಂದಿರುವುದು. ಅದನ್ನು ತೆಗೆದು ಇವನಿಗೆ ಕೊಡು. ಇತನು ಇಲ್ಲಿಯೇ ಇದ್ದುಗೊಂಡು ನನ್ನ ಧನವೆಲ್ಲವೂ ವಿನಿಯೋಗಿಸಲ್ಪಡುವವರೆಗೂ ನನ್ನ ಪ್ರಾಣ ಹೋಗದಂತೆ ಚಿಕಿತ್ಸೆಗಳನ್ನು ಮಾಡುತಿರಲಿ.
   ಪರಂತಪನು ಆ ಆಭರಣವನ್ನು ತೆಗೆದು ಜೀವಾನಂದ ವೈದ್ಯನಿಗೆ ಕೊಡಲು, ಅವನು ಅತ್ಯಂತ ಸಂತುಷ್ಟನಾಗಿ, ಮಾಧವನಿಗೆ ಯಾತನೆಯಿಲ್ಲದ ಹಾಗೆ ಆ ಗಾಯಗಳಿಗೆ ತಕ್ಕ ಔಷಧಗಳನ್ನು ಹಾಕುತ್ತ, ಅವನ ಪ್ರಜ್ಞೆಗೂ ಪ್ರಾಣಕ್ಕೂ ಶೈಥಿಲ್ಯ ಸಂಭವಿಸದಂತೆ ಚಿಕಿತ್ಸೆಯನ್ನು ಮಾಡುತಿದ್ದನು.
ಮಾಧವ -ಅಯ್ಯಾ ! ಪರಂತಪ ! ಆಚೆಯ ಕೊಠಡಿಯಲ್ಲಿ ಅರ್ಥಪರನೆಂಬ ಲಾಯರೊಬ್ಬನಿರುವನು. ಅವನನ್ನು ಕರೆದುಕೊಂಡು ಬಾ.
   ಹೀಗೆ ಹೇಳುತ್ತಿರುವಷ್ಟರಲ್ಲಿಯೇ ಅರ್ಥಪನು ಸಮೀಪಕ್ಕೆ ಬಂದು “ಅಯ್ಯಾ ! ಮಾಧವನೆ ! ನಾನು ಇಲ್ಲಿಯೇ ಬಂದಿರುವೆನು. ನೀನು ಈಗ ಅನುಭವಿಸುತ್ತಿರುವ ಅವಸ್ಥೆಯನ್ನು ನೋಡಿ ನನಗೆ ಬಹಳ ಸಂಕಟವಾಗುತ್ತಿರುವುದು” ಎಂದನು.
ಮಾಧವ-ನೀನು ಬಂದದ್ದು ಬಹಳ ಸಂತೋಷವಾಯಿತು. ಲೋಕದಲ್ಲಿ ಕಷ್ಟಕ್ಕೆ ಭಾಗಿಗಳಾಗದೆ ಇರತಕ್ಕವರು ಯಾರು ತಾನೆ ಇರುವರು? ಇದಕ್ಕಾಗಿ ನೀನು ಚಿಂತಿಸಬೇಡ. ಈಗ ನಿನ್ನಿಂದ ನನಗೆ ಕೆಲವು ಕಾರ್ಯಗಳಾಗಬೇಕಾಗಿರುವುದರಿಂದ, ಅವನ್ನು ನ್ಯಾಯಶಾಸ್ತ್ರಾನುಸಾರವಾಗಿ ನಡೆ