ಪುಟ:ಪರಂತಪ ವಿಜಯ ೨.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೩

ಅಧ್ಯಾಯ ೩


ದುರ್ಬುದ್ದಿಯನ್ನು ಸಂಹರಿಸಿರಬೇಕೆಂದು ನಿಶ್ಚಯಿಸಿ, ಅವನನ್ನು ನಗರಾಧ್ಯಕ್ಷನ ಬಳಿಗೆ ಕರೆದುಕೊಂಡು ಹೋದರು' ಎಂದು ಹೇಳಿದರು. ಕೂಡಲೆ ಪರಂತಪನು ಸ್ವಲ್ಪ ವ್ಯಾಕುಲನಾಗಿ, ಮಾಧವನು ಮಲಗಿರುವ ಸ್ಥಳಕ್ಕೆ ಬಂದು, ಅವನ ದೇಹಸ್ಥಿತಿಯ ವಿಷಯದಲ್ಲಿ ಜೀವಾನಂದ ವೈದ್ಯನನ್ನು ಕೇಳಲು, ಜೀವಾನಂದನು, ಇನ್ನು ೩-೪ ಘಂಟೆಗಳವರೆಗೆ ಇವನ ಪ್ರಾಣಕ್ಕೆ ಯಾವ ಅಪಾಯವೂ ಇಲ್ಲವೆಂದನು. ಆಗ ಪರಂತಪನು ವೈದ್ಯನನ್ನು ಎರಡು ಘಂಟೆಗಳ ಕಾಲ ಅವಕಾಶ ಕೇಳಿಕೊಂಡು, ತ್ವರೆಯಿಂದ ನಗರಾಧ್ಯಕ್ಷನ ಆಸ್ಥಾನಕ್ಕೆ ಬಂದು ವಿಚಾರಿಸಲು, ಮಂಜೀರಕನು ತಪ್ಪಿತಸ್ಥನೆಂದು ತಿಳಿದುದರಿಂದ ಅವನನ್ನು ಕಾರಾಗೃಹದಲ್ಲಿಟ್ಟಿರುವರೆಂದು ಅಲ್ಲಿದ್ದ ಸೇವಕರಿಂದ ತಿಳಿಯಬಂದಿತು. ಅಲ್ಲಿಂದ ಕಾರಾಗೃಹದ ಬಾಗಲಿಗೆ ಬಂದು ನೋಡಲು, ಬಾಗಿಲು ಬೀಗ ಹಾಕಿದ್ದಿತು. ಅಲ್ಲಿ ಕಾವಲಾಗಿದ್ದ ಯಾಮಿಕನೊಬ್ಬನು ಮಾತ್ರ ಬಾಗಿಲಲ್ಲಿ ನಿಂತಿದ್ದನು. ಪರಂತಪನು ಆ ಮಾರ್ಗವಾಗಿ ಬರಲು, ಅಲ್ಲಿದ್ದ ಕಾವಲುಗಾರನು ಇನನನ್ನು ನೋಡಿ 'ಯಾರು ? ಇಷ್ಟು ಹೊತ್ತಿನಲ್ಲಿ ಇಲ್ಲಿಗೆ ಬರಲು ಕಾರಣವೇನು ? ಹೊರಟುಹೋಗು , ಇಲ್ಲದಿದ್ದರೆ ನಿನ್ನನ್ನು ಈಗಲೇ ಗುಂಡಿನಿಂದ ಹೊಡೆಯುವನು' ಎಂದು ಗದರಿಸಿದನು. ಆಗ ಪರಂತಪನು 'ಅಯ್ಯಾ ; ನಾನು ಪರದೇಶಿ, ದಾರಿ ತಿಳಿಯದೆ ಇಲ್ಲಿಗೆ ಬಂದೆನು. ಮನ್ನಿಸು. ಹೊರಟುಹೋಗುತ್ತೇನೆ' ಎಂದು ಹೇಳಿ, ಬೇರೆ ಮಾರ್ಗದಿಂದ ಅವನ ಹಿಂದುಗಡೆಯಲ್ಲಿ ಬಂದು, ಥಟ್ಟನೆ ಅವನಮೇಲೆ ಬಿದ್ದು, ಅವನ ಕೈಯಲ್ಲಿದ್ದ ಬಂದೂಕವನ್ನು ಕಿತ್ತು ಬಿಸುಟು, ಅವನನ್ನು ನೆಲಕ್ಕೆ ಕೆಡವಿಕೊಂಡು, ಬಾಯಿಗೆ ಬಟ್ಟೆಯನ್ನು ತುರುಕಿ, ಕೈಕಾಲುಗಳನ್ನು ಬಿಗಿದು ಕಟ್ಟಿಹಾಕಿದನು. ಆಮೇಲೆ ಅವನ ಮೈಯನ್ನೆಲ್ಲ ಶೋಧಿಸುತಿರಲು, ಅವನ ಜೇಬಿನಲ್ಲಿ ಒಂದು ಬೀಗದಕೈ ಸಿಕ್ಕಿತು. ಅದನ್ನು ತಂದು ಕಾರಾಗೃಹದ ಬಾಗಿಲನ್ನು ತೆಗೆದು 'ಮಂಜೀರಕಾ ! ಎಲ್ಲಿರುವೆ ?' ಎಂದು ಗಟ್ಟಿಯಾಗಿ ಕೂಗಿದನು. ಆಗ ಒಳಗಿನಿಂದ 'ಸ್ವಾಮಿ ! ಇಲ್ಲಿರುವೆನು' ಎಂಬ ಶಬ್ದವು ಕೇಳಬಂದಿತು. ಆಗ ಒಳಮನೆಯ ಚಿಲುಕವನ್ನು ತೆಗೆಯಲು, ಮಂಜೀರಕನು ಅತಿ ವಿಸ್ಮಿತನಾಗಿ ಹೊರಕ್ಕೆ ಬಂದನು. ಅವನನ್ನು ಅತಿ ಸಂತೋಷದಿಂದ ಆಲಿಂಗಿಸಿಕೊಂಡು, ತಾನು ಮಾಡಿದ ಸಾಹಸ