ಕಾಗಿದೆ. ಈ ವಿಷಯದಲ್ಲಿ ಯಾವ ಅಪಾಯವೂ ಬರದಂತೆ ನೋಡಿಕೊಳ್ಳುತ್ತೇನೆ. ನೀನು ಯಾವುದಕ್ಕೂ ಭಯಪಡದೆ ಅಜ್ಞಾತವಾಸವನ್ನು ಮಾಡುತ್ತಿರು. ಸುಮಿತ್ರನು ಬರತಕ್ಕ ವೇಳೆಯಾಯಿತು. ಸಲ್ಲಾಪಕ್ಕೆ ವಿಶೇಷ ಕಾಲವಿಲ್ಲ. ನೀನು ಜಾಗ್ರತೆಯಾಗಿ ನಿನ್ನ ಆಪ್ತ ಸ್ನೇಹಿತಳ ಮನೆಯನ್ನು ಸೇರು.
ಕಾಮಮೋಹಿನಿ-ನಿನ್ನ ಆಜ್ಞೆಯಂತೆ ನಡೆಯುವೆನು. ದೇವರು ನಿನಗೆ ಏನೂ ವಿಪತ್ತು ಬರದಂತೆ ಕಾಪಾಡಲಿ.
ಎಂದು ಹೇಳಿ, ಕಾಮಮೋಹಿನಿಯು ಯಾರಿಗೂ ತಿಳಿಯದಂತೆ ಆರ್ಯಕೀರ್ತಿಯ ಮನೆಗೆ ಹೊರಟುಹೋದಳು. ಪರಂತಪನೂ ಸುಮಿತ್ರನ
ಮನೆಗೆ ಹೊರಟುಹೋದನು.
ಅಧ್ಯಾಯ ೫.
ಈ ರೀತಿಯಲ್ಲಿ ಕಾಮಮೋಹಿನಿಯು ಸಾಕುತಂದೆಯ ಮನೆ ಯನ್ನು ಬಿಟ್ಟು ಹೊರಟುಹೋದ ದಿನವೇ, ಶಂಬರನಿಗೆ ಇವಳನ್ನು ಕೊಟ್ಟು ವಿವಾಹಮಾಡುವುದಾಗಿ ನಿಶ್ಚಿತಾರ್ಥವನ್ನು ಗೊತ್ತುಮಾಡಿ, ಅನೇಕ ಬಂಧುಮಿತ್ರರು ಗಳಿಗೆ ಲಗ್ನಪತ್ರಿಕೆಗಳು ಕಳುಹಿಸಲ್ಪಟ್ಟಿದ್ದವು. ಇವಳು ಹೊರಟುಹೋದ ಸ್ವಲ್ಪ ಹೊತ್ತಿನೊಳಗಾಗಿ, ಈ ಶುಭಕಾರ್ಯಕ್ಕೋಸ್ಕರ ಕರೆಯಲ್ಪಟ್ಟಿದ್ದ ಜನಗಳು ಒಬ್ಬೊಬ್ಬರಾಗಿ ಬರುವದಕ್ಕುಪಕ್ರಮವಾಯಿತು.
ಪರಂತಪನು, ಹೀಗೆ ಬರುವ ಅತಿಥಿಗಳನ್ನು ಎದುರುಗೊಳ್ಳುತ್ತ ಅವರೊಡನೆ ಮಾತನಾಡುತ್ತಿದ್ದನು. ಆಗತಾನೆ ಒಬ್ಬ ಜವಾನನು ಎರಡು ಕಾಗದಗಳನ್ನು ತಂದು ಸುಮಿತ್ರನ ಜವಾನನ ಕೈಯಲ್ಲಿ ಕೊಟ್ಟು ಹೊರಟು ಹೋದನು. ಪರಂತಪನು, ಆ ಮೇಲುವಿಲಾಸಗಳನ್ನು ದೂರದಿಂದಲೇ ನೋಡಿ ಇವು ಕಾಮಮೋಹಿನಿಯ ಕಾಗದಗಳು; ಇವುಗಳನ್ನು ನೋಡಿದ