ಪುಟ:ಪರಂತಪ ವಿಜಯ ೨.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೫

೪೩


ಮೊದಲುಗೊಂಡು, ನನ್ನನ್ನು ಸ್ವಂತ ಮಗಳಲ್ಲಿರತಕ್ಕ ಪ್ರೇಮಕ್ಕಿಂತಲೂ ಹೆಚ್ಚಾದ ಪ್ರೇಮದಿಂದ ಸಾಕಿ, ನನಗೆ ವಿದ್ಯೆ ಬುದ್ಧಿಗಳನ್ನು ಕಲಿಯಿಸಿದಿರಿ, ಇದಕ್ಕೆ ನಾನು ಎಷ್ಟು ಕೃತಜ್ಞಳಾಗಿದ್ದರೂ ಸಾಲದು; ಇದಕ್ಕಾಗಿ ನಾನು ಪ್ರಾಣವನ್ನು ಒಪ್ಪಿಸುವುದರಿಂದಲಾದರೂ ನನ್ನ ಕೃತಜ್ಞತೆಯನ್ನು ತೋರಿಸುವುದಕ್ಕೆ ಸಿದ್ಧಳಾಗಿರುವೆನು. ಆದರೆ, ಈ ದಿನ ನನ್ನನ್ನು ಬಲಾತ್ಕಾರವಾಗಿ ಶಂಬರನಿಗೆ ಕೊಟ್ಟು ವಿವಾಹಮಹೋತ್ಸವವನ್ನು ನಡೆಸುವುದಾಗಿ ನಿಷ್ಕರ್ಷೆಮಾಡಿ, ಇದಕ್ಕಾಗಿ ಅತಿಥಿಗಳನ್ನು ಕರೆಯಿಸುವ ಪ್ರಯತ್ನದಲ್ಲಿದ್ದೀರಿ. ಮೊದಲಿನಿಂದ ಈತನ ವಿಷಯದಲ್ಲಿ ನನಗಿರತಕ್ಕ ಅಭಿಪ್ರಾಯವನ್ನು ನಾನು ಧಾರಾಳವಾಗಿ ತಮಗೆ ತಿಳಿಯಿಸಿಯೇ ಇದ್ದೇನೆ. ಈತನ ಶೀಲಸ್ವಭಾವಗಳೂ ಗುಣಾತಿಶಯಗಳೂ ತಮಗೆ ತಿಳಿಯದವುಗಳಾಗಿಲ್ಲ. ಈತನನ್ನು ವಿವಾಹಮಾಡಿಕೊಂಡು-ಜೀವಿಸಿರುವವರೆಗೂ ದುಸ್ಸಹವಾದ ವ್ಯಥೆಯನ್ನು ಅನುಭವಿಸುವುದಕ್ಕಿಂತ ಈಗಲೆ ಪ್ರಾಣಹತ್ಯವನ್ನು ಮಾಡಿಕೊಳ್ಳುವುದುತ್ತಮವೆಂದು ಸಂಕಲ್ಪಿಸಿದ್ದೇನೆ. ಈತನಿಗೆ ಕೊಟ್ಟು ವಿವಾಹಮಾಡುವುದಕ್ಕಿಂತಲೂ, ಈ ದೇಹವನ್ನು ಬಿಡೆಂದು ತಾವು ಆಜ್ಞಾಪಿಸಿದ್ದರೆ, ಬಹಳ ಸಂತೋಷದಿಂದ ತನ್ನ ಆಜ್ಞೆಯನ್ನು ಶಿರಸಾ ವಹಿಸುತ್ತಿದ್ದನು. ತಾವು ಮಾಡತಕ್ಕೆ ಬಲಾತ್ಕಾರವನ್ನು ನೋಡಿದರೆ, ನನಗೆ ಬಹಳ ಸಂಕಟವಾಗುತ್ತದೆ. ತಮ್ಮ ಪ್ರಯತ್ನವನ್ನು ತಮ್ಮ ಮನಸ್ಸಿನಲ್ಲಿಯೇ ಯೋಚಿಸಬೇಕು. ನನ್ನನ್ನು ತಮ್ಮ ಮಗಳಿಗಿಂತಲೂ ಹೆಚ್ಚಾಗಿ ಸಾಕಿದಿರಿ. ನನಗೆ ಸರ್ವವಿಷಯ ದಲ್ಲಿಯ ಅನುರೂಪನಾದ ವರನಿಗೆ ಕೊಟ್ಟು ವಿವಾಹಮಾಡುವುದು ತಮ್ಮ ಕರ್ತವ್ಯವಲ್ಲವೆ? ಸರ್ವವಿಧದಲ್ಲಿಯೂ ನನಗೆ ಅನನುರೂಪನಾದವನಿಗೆ ನನ್ನ ಇಷ್ಟಕ್ಕೆ ವಿರೋಧವಾಗಿ ಬಲಾತ್ಕಾರದಿಂದ ನನ್ನನ್ನು ಕೊಟ್ಟು ವಿವಾಹ ಮಾಡಬೇಕೆಂಬ ಸಂಕಲ್ಪವು ತಮಗೆ ಉಂಟಾಗಬಹುದೆ? ಈ ತಮ್ಮ ಪ್ರಯತ್ನವು ನನಗೆ ಮಾತ್ರವೇ ಅನಭಿಮತವಾದುದಲ್ಲ; ನನ್ನನ್ನೂ ಶಂಬರನನ್ನೂ ನೋಡಿರತಕ್ಕ ಸರ್ವರಿಗೂ ಇದು ಅನಭಿಮತವಾಗಿದೆ. ಇದಲ್ಲದೆ, ಮೊದಲು ನೀವು ಈ ನಿಶ್ಚಿತಾರ್ಥವನ್ನು ಮಾಡಿದ ದಿವಸವೇ ಮಾಧವನು ಸ್ವರ್ಗಸ್ಥನಾದ ವರ್ತಮಾನವು ತಮಗೆ ಶ್ರುತವಾಗಿ ಈ ಉತ್ಸವಕ್ಕೆ ಭಂಗವಾದುದರಿಂದ, ಈ ಸಂಬಂಧವು ದೇವರಿಗೂ ಅಭಿಮತವಲ್ಲವೆಂದು ಗೊತ್ತಾಗುತ್ತದೆ. ಇಂಥ