ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೯
೭೭

ವುಂಟಾಗುವಂತೆ ಮಾಡಿಕೊಳ್ಳುವೆನು ಈ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು? " ಎಂದನು.
ಅರ್ಥಪರ- ಇದು ಕಷ್ಟಸಾಧ್ಯವು. ಆ ವಿವಾಹದ ಸಂಗತಿಯು ನೆರೆ ಹೊರೆಯವರಾದ ಐದಾರು ಮನೆಯವರಿಗೆ ತಿಳಿದುಹೋಗಿದೆ.
ಶಂಬರ- ಹಾಗಾದರೆ, ಅದನ್ನು ಬಲ್ಲವರನ್ನೆಲ್ಲ ಒಟ್ಟಿಗೆ ಕೊಂದುಬಿಟ್ಟರೆ, ನನ್ನ ಮನೋರಥವು ಸಿದ್ಧಿಸುವದಲ್ಲವೆ?
ಅರ್ಥಪರ- ಅದು ಹೇಗೆ ಸಾಧ್ಯವಾಗುವುದು? ಪರಂತಪನು ಸಾಧಾರಣನಲ್ಲ. ಈ ನಮ್ಮ ಪ್ರಯತ್ನವೇನಾದರೂ ಪ್ರಕಟವಾದರೆ, ನಮ್ಮನ್ನು ಮರಣ ದಂಡನೆಗೆ ಗುರಿಮಾಡುವನು.
ಶಂಬರ - ಹೆದರಬೇಡ, ನಿನಗೆ ಹತ್ತು ಲಕ್ಷ ವರಹಗಳನ್ನು ಕೊಡುವೆನು. ನನ್ನ ಪ್ರಯತ್ನಕ್ಕೆ ಸಹಾಯಕನಾಗಿರು.
ಅರ್ಥಪರ- ಅಯ್ಯಾ! ಶಂಬರ 'ಹಾಗಾದರೆ, ನೀನು ಕೊಡತಕ್ಕ ಹಣವನ್ನು ಮೊದಲು ಕೊಡಬೇಕು. ಈ ಪ್ರಯತ್ನದಲ್ಲಿ ನಾನು ಒಂದು ವೇಳೆ ಸಿಕ್ಕಿಕೊಂಡರೂ, ಲ೦ಚವನ್ನಾದರೂ ಕೊಟ್ಟು ಬಿಡಿಸಿಕೊಂಡು ಬರಬೇಕಲ್ಲವೆ! ಆದುದರಿಂದ, ನೀನು ಮೊದಲು ಹಣವನ್ನು ಕೊಟ್ಟರೆ ಸಹಾಯಕನಾಗಿರುವೆನು, ಇಲ್ಲದಿದ್ದರೆ ನನ್ನನ್ನು ಅಪೇಕ್ಷಿಸಬೇಡ.
ಕೂಡಲೆ ಶಂಬರನು ಆ ಹಣಕ್ಕಾಗಿ ತನ್ನ ವಶದಲ್ಲಿದ್ದ ಸುಮಿತ್ರನ ಅಮೂಲ್ಯವಾದ ಕೆಲವು ರತ್ನಾಭರಣಗಳನ್ನು ಕೊಡಲು, ಅರ್ಥಪರನು ಅವನ್ನೆಲ್ಲ ತೆಗೆದುಕೊಂಡು ಹೋಗಿ ಮನೆಯಲ್ಲಿ ಬಚ್ಚಿಟ್ಟು ಬಂದು "ಅಯ್ಯಾ ! ಮಿತ್ರನೆ ! ಇನ್ನು ನೀನು ಹೇಳಿದ ಕೆಲಸವನ್ನು ಮಾಡುವುದರಲ್ಲಿ ಬದ್ಧನಾಗಿರುತ್ತೇನೆ. ಅದರಿಂದ ಯಾವ ವಿಪತ್ತುಗಳು ಬಂದರೂ ಅನುಭವಿಸುವುದಕ್ಕೂ ಸಿದ್ಧನಾಗಿದ್ದೇನೆ.” ಎಂದು ಕೇಳಿದನು.
ಶಂಬರ-ನೀನು ಮನಃಪೂರ್ವಕವಾಗಿ ಮಾಡುವೆಯೋ?
ಅರ್ಥಪರ-ಸತ್ಯವಾಗಿಯೇ ನೀನು ಏನು ಹೇಳಿದರೂ ಮಾಡುವೆನು, ಹೇಳು.
ಶಂಬರ- ಹಾಗಾದರೆ ಆ ನೀಚನಾದ ಪರಂತಪನನ್ನು ಕೊಲ್ಲಬೇಕು.