ಪುಟ:ಪರಂತಪ ವಿಜಯ ೨.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮

ಪರಂತಪ ವಿಜಯ


ಕಲಾವತಿ- ಹೌದು, ನಾನು, ಕಲಾವತಿ!!!
  ಇವರಿಬ್ಬರೂ ಭಂಡಾರದ ಮಧ್ಯಭಾಗದಲ್ಲಿದ್ದರು. ಕಲಾವತಿಯು, ಸುಮಿತ್ರನ ಮರಣದ ದೆಸೆಯಿಂದ ಉಂಟಾದ ದುಃಖದಿಂದಲೂ, ಶಂಬರನು ಏಕಾಂತವಾಗಿ ಭಂಡಾರವನ್ನು ಪ್ರವೇಶಿಸಿ ಕಾಗದಪತ್ರಗಳನ್ನು ತೆಗೆದು ಕೊಂಡದ್ದರಿಂದುಂಟಾದ ಆಗ್ರಹದಿಂದಲೂ, ಬಹಳ ಭಯಂಕರಳಾಗಿದ್ದಳು. ಆಕೆಯ ಕಣ್ಣಿನಲ್ಲಿ ಪಿತೃವಿಯೋಗದಿಂದ ಉಂಟಾದ ನೀರೂ, ಶಂಬರನ ದೌರಾತ್ಮ್ಯದಿಂದ ಉಂಟಾದ ಕೋಪವೂ, ಒಂದಕ್ಕಿಂತ ಒಂದು ಅತಿಶಯವಾಗಿದ್ದುವು. ಕೈಯಲ್ಲಿ ಪಿಸ್ತೂಲನ್ನು ಹಿಡಿದುಕೊಂಡು ಇದ್ದಳು. ಶಂಬರನನ್ನು ಯಮಪುರಿಗೆ ಕಳುಹಿಸಬೇಕೆಂದು ಸಂಕಲ್ಪ ಮಾಡಿಕೊಂಡು ಬಂದಿರತಕ್ಕ ಮೃತ್ಯದೇವತೆಯೋಪಾದಿಯಲ್ಲಿ ಕಾಣಬಂದ ಕಲಾವತಿಯನ್ನು ನೋಡಿ ಶಂಬರನು ಭಯಪರವಶನಾದನು.

ಶಂಬರ- ಕಲಾವತಿ! ಇದೇಕೆ ಇಷ್ಟು ಕೋಪವುಳ್ಳವಳಾಗಿರುತ್ತೀಯೆ? ಪಿಸ್ತೂಲನ್ನು ಬೀಸಾಕು. ಸ್ತ್ರೀಯರ ಕೈಗೆ ಪಿಸ್ತೂಲು ಭೂಷಣವಾದುದಲ್ಲವೆಂಬುದು, ನಿನಗೆ ತಿಳಿಯದೆ? ಅದೆಲ್ಲಾದರೂ ಅಕಸ್ಮಾತ್ತಾಗಿ ಹತ್ತಿ ಕೊಂಡು ಯಾರಿಗಾದರೂ ತಗುಲೀತು.

ಕಲಾವತಿ- ಸ್ತ್ರೀಯರ ಕೈಗೆ ಪಿಸ್ತೂಲು ಹೇಗೆ ಅನರ್ಹವಾದುದೊ, ಪುರುಷರ ಕೈಗೆ ಪರಸ್ವಾಪಹರಣವೂ ಹಾಗೆಯೇ ಅನರ್ಹವಾದುದು. ಈ ಕಾಗದ ಪತ್ರಗಳನ್ನು ಕಳುವುಮಾಡಿ, ನಿನ್ನ ಕೈಗಳು ಬಹಳ ದುಷ್ಟವಾಗಿ ಪರಿಣಮಿಸಿವೆ. ಕಾಗದ ಪತ್ರಗಳನ್ನು ಮೊದಲಿದ್ದ ಸ್ಥಾನದಲ್ಲಿ ಇಟ್ಟು ಇಲ್ಲಿಗೆ ಹೇಗೆ ಕಳ್ಳತನದಿಂದ ಬಂದೆಯೋ ಹಾಗೆಯೇ ಹೊರಟು ಹೋದರೆ, ನಿನಗೆ ಇನ್ನೂ ಸ್ವಲ್ಪ ದಿವಸ ಆಯುಸ್ಸಿರುವುದು. ಹಾಗಿಲ್ಲದ ಪಕ್ಷದಲ್ಲಿ, ನಿನ್ನ ದೌರಾತ್ಮ್ಯಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸುವೆ. ಯಮಪುರಿಗೆ ಮಾರ್ಗವನ್ನು ಹುಡಕಬೇಡ. ನನ್ನ ತಂದೆಯನ್ನು ಕೊಂದುದಲ್ಲದೆ, ನನ್ನ ಮನೆಗೆ ಕಳವು ಮಾಡುವುದಕ್ಕೋಸ್ಕರವೂ ಬಂದಿದ್ದೀಯೆ. ಕಾಗದಪತ್ರಗಳನ್ನು ಕೆಳಗೆ ಹಾಕಿ ಹೋಗುವೆಯೋ?-ಯಮಪುರಿಗೆ ಕಳುಹಿಸಲೋ?

ಶಂಬರ-ಹುಚ್ಚಳ ಹಾಗೆ ಮಾತನಾಡಬೇಡ. ನನ್ನ ಮಾತನ್ನು ಕೇಳು. ಪಿಸ್ತೂಲನ್ನು ಬೀಸಾಕು. ಹಾಗಿಲ್ಲದ ಪಕ್ಷದಲ್ಲಿ ನೀನು ಬಹಳ ಕಷ್ಟಕ್ಕೆ ಗುರಿಯಾಗುವೆ.