ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



102

ಕನಸು

ಆದರೆ ಆತ ಒಮ್ಮೆಯೂ ಆಕೆಯನ್ನು ಸರಿಯಾಗಿ ದಿಟ್ಟಿಸಿ ನೋಡಲಿಲ್ಲ.
ಯಾವ ಆಸೆಯೂ ಉಳಿಯದೆ ಸುನಂದಾ ಮೌನವಾಗಿ ತನ್ನ ವಿಧಿಯನ್ನು
ಹಳಿದಳು.

****


ಪುಟ್ಟಣ್ಣ ಆಫೀಸಿಗೆಂದು ಹೊರಟ. ಆತನ ಮೆದುಳು ಸಿಡಿಮಿಡಿ ಗುಟ್ಟುತಿತ್ತು.
ಸುನಂದಾ ತನ್ನನ್ನೆ ನೋಡುತ್ತಿದ್ದಳೆಂಬುದು ಗೊತ್ತಿತ್ತು ಆತನಿಗೆ. ಆ ಕಾರಣದಿಂದಲೇ
ಆತ ಆಕೆಯ ಕಣ್ಣಗಳನ್ನು ಅಪ್ಪಿತಪ್ಪಿಯೂ ಸ೦ಧಿಸದಂತೆ ಎಚ್ಚರ ವಹಿಸಿದ.
ಆಫೀಸು ಸೇರಿದಾಗ ಅಲ್ಲಿ ಕೆಲಸ ಮಾಡಲು ಮನಸ್ಸಾಗಲಿಲ್ಲ. ಆರೋಗ್ಯ ಸರಿ
ಯಾಗಿಲ್ಲವೆಂದು ಚೀಟಿ ಬರೆದಿಟ್ಟು, ಊಟ ಬಂದಾಗ ಮನೆಗೆ ವಾಪಸು ಕಳುಹಲು
ಜವಾನನಿಗೆ ಹೇಳಿ,ಹೊರಬಂದ.
ಆತ ಸಾಮಾನ್ಯವಾಗಿ ಹೆಚ್ಚಾಗಿ ಸಿಗರೇಟು ಸೇದುತ್ತಿರಲಿಲ್ಲ. ಆಪ್ತ ಕೋಟೆಯ
ಸಂಸರ್ಗದಲ್ಲಿದ್ದಾಗ ಎಷ್ಟೋ ಅಷ್ಟೆ. ಈ ದಿನ ಒಬ್ಬನೇ ಸೇದಬೇಕೆಂದು ಆಸೆ
ಯಾಯಿತು. ಒ೦ದು ಪ್ಯಾಕೆಟು ಪ್ಲೇಯರ್ಸ್ ಸಿಗರೇಟನ್ನೂ ಬೆಂಕಿ ಪೊಟ್ಟಣವನ್ನೂ
ಕೊಂಡುಕೊಂಡು ಒಂದರ ಮೇಲೊಂದಾಗಿ ಸೇದತೊಡಗಿದ.
ಬೀದಿ ನಡೆದುದಾಯಿತು. ಕಾಲುಗಳು ಲಾಲ್ ಬಾಗ್ ಸೇರಿದುವು. ರಜಾ
ದಿನವಲ್ಲದ ಹೆಚ್ಚಿನ ಜನಸಂಚಾರವಿಲ್ಲದ ಮಧ್ಯಾಹ್ನದ ಆ ಹೊತ್ತು, ಮರಗಿಡ ಹೂ
ಹುಲ್ಲುಗಳೆಲ್ಲ ತಮ್ಮೊಳಗೇ ಸರಸ ಸಲ್ಲಾಪ ನಡೆಸುತ್ತಿದ್ದುವು. ಪುಟ್ಟಣ್ಣ ಒಂದು ಶಿಲಾ
ಸನದ ಮೇಲೆ ಕುಳಿತ. ಕುಳಿತು ಸಿಗರೇಟು ಸೇದುತ್ತ ಯೋಚಿಸಿದ.
ತಾನು ದುರ್ಬಲ ಮನುಷ್ಯ. ಎಲ್ಲರ ಹಾಗೆಯೇ. ಅದರಲ್ಲಿ ಸಂದೇಹವಿರಲಿಲ್ಲ.
ತಾನು ಯೋಚಿಸಿದ್ದೇನು? ಆದದ್ದೇನು?
ಈ ಸಂಸಾರದ ಬಂಧನಗಳನ್ನೆಲ್ಲ ಹೇಗಾದರೂ ಮಾಡಿ ಕಡಿದು ಹಾಕಬೇಕೆಂಬುದು
ಆತನ ಅಪೇಕ್ಷೆಯಾಗಿತ್ತು. ಜಗಳವಾಡಿ, ಹೆಂಡತಿ ತಂದೆ ಮನೆಗೆ ಹೊರಟುಹೋದರೆ,
ಈ ಸಮಸ್ಯೆ ಬಗೆಹರಿಯುತ್ತದೆಂದು ಆತ ಎಷ್ಟು ಸಾರೆ ಯೋಚಿಸಿರಲಿಲ್ಲ? ಆ ಪರಿಸ್ಥಿತಿ
ಯನ್ನು ಉಂಟುಮಾಡುವುದಕ್ಕೋಸ್ಕರವೇ ಅಲ್ಲವೆ ಮನೆಯಲ್ಲಿ ಆ ರೀತಿ ವರ್ತಿಸು
ತಿದ್ದುದು?
ಇಸ್ಪೀಟು ಆಟದಲ್ಲಿ, ದುಡ್ಡು ಬರುತಿತ್ತು-ಹೋಗುತ್ತಿತ್ತು. ಅದು ಚಿಲ್ಲರೆ
ವಿಷಯ. ತನಗೆ ಕಣ್ಣಿದ್ದುದು ದೊಡ್ಡ ರೀತಿಯ, ಕೊಂಡು ಮಾರುವ, ಸುಲಭ
ಲಾಭದ ವ್ಯಾಪಾರದ ಮೇಲೆ, ಆ ಸಂಬಂಧದಲ್ಲಿ ತಾನು ಊರೂರು ಸಂಚಾರ ಮಾಡ
ಬೇಕು, ಜಗತ್ತನ್ನು ನೋಡಬೇಕು, ತನ್ನನ್ನು ಹಿಂದಕ್ಕೆ ಬಿಗಿಹಿಡಿಯುವ ಯಾವ ಅಡ
ಚಣೆಯೂ ಇರಬಾರದು-ಎಂದೆಲ್ಲ ಆತ ಅಂದುಕೊಂಡಿದ್ದ. ಮೊದಮೊದಲು
ಕುಡಿತವೂ ಆತನಿಗೆ ಇಷ್ಟವಿರಲಿಲ್ಲ. ಅಭ್ಯಾಸವಾದ ಮೇಲೆ ಪ್ರಿಯವೆನಿಸಿತು....ಅದೇ
ಸಂದರ್ಭದಲ್ಲಿ ಹೆಣ್ಣಿನ ಪ್ರಸ್ತಾಪ ಬಂದಿತ್ತು ಎಷ್ಟೋ ಸಾರೆ. ಜತೆಗಾರನೊಬ್ಬ ತನ್ನ