ಪುಟ:ಪಾಲಿಗೆ ಬಂದ ಪಂಚಾಮೃತ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

42

ಕನಸು

ಬೀಡು ಬಿಟ್ಟಳು. ಆಕೆ ಬಂದ ಸಂಭ್ರಮದಲ್ಲಿ ರಾಧಮ್ಮನಿಗೆ ಸುನಂದೆಯನ್ನು
ಹೆಚ್ಚಾಗಿ ಮಾತನಾಡಿಸುವುದಕ್ಕೂ ಬಿಡುವಿಲ್ಲದೆ ಹೋಯಿತು. ರಾಧಮ್ಮನ ನಾದಿನಿ
ಹಿಂದಿನ ಸಾರೆ ಬಂದಿದ್ದಾಗಲೇ ಸುನಂದೆಯ ಪರಿಚಯ ಮಾಡಿಕೊಂಡಿದ್ದಳು. ಆದರೆ
ಸುನಂದಾ ಓದಿದವಳೆಂಬ ತಿಳಿವಳಿಕೆ, ಆಕೆಯಲ್ಲಿ ದೀನತನದ ಭಾವನೆಯನ್ನು ಹುಟ್ಟಿಸಿ
ಅವರಿಬ್ಬರೊಳಗೆ ಆತ್ಮೀಯತೆಯುಂಟಾಗದಂತೆ ತಡೆಯೊಡ್ಡಿತು.
ರಾಧಮ್ಮ ಈ ಸಲವೂ ನಾದಿನಿಗೆ ಹೇಳಿದರು:
“ಹೋಗಿ, ಸುನಂದಾ ಕೈಲಿ ಮಾತಾಡ್ಕೊಂಡು ಬನ್ನಿ. ಪಾಪ, ಕೈಮಗು. ಇಲ್ದೇ
ಹೋಗಿದ್ರೆ ಇಲ್ಲಿಗೇ ಕರೀಬಹುದಾಗಿತ್ತು.”
“ಅಯ್ಯೋ ಬೇಡಿ ಅತ್ತಿಗೆ. ಅವರ ಕೈಲಿ ಏನ್ಮಾತಾಡೋಣಾಂತಲೇ
ಗೊತ್ತಾಗಲ್ಲ.”
“ಏನು ಭಯವೆ? ಪಾಪ! ಸಾಧು ಪ್ರಾಣಿ ಆಕೆ.”
“ಒಳ್ಳೆಯವಳೇನೋ ನಿಜ. ಆದರೂ—”
ಈ ಸಂಕೋಚ ಸಾಲದುದಕ್ಕೆ, ಸುನಂದೆಯೂ ಅತಿಮಾತಿನವಳಾಗಿರಲಿಲ್ಲ.
ತಾನಾಗಿ ಮೇಲೆ ಬಿದ್ದು ಸ್ನೇಹ ಸಂಪಾದಿಸುವ ಗುಣವೇ ಅವಳಿಗಿರಲಿಲ್ಲ. ಹೀಗಾಗಿ
ಆಕೆ ಮನೆಯಲ್ಲೇ ಕುಳಿತಳು.
ರಾಧಮ್ಮ, ನಾದಿನಿಯನ್ನೂ ಮಕ್ಕಳನ್ನೂ ಕರೆದುಕೊಂಡು ಒಂದು ಸಿನಿಮಾ
ನೋಡಿ ಬಂದರು. ವಿಶ್ವೇಶ್ವರನ ದರ್ಶನಮಾಡಿದರು. ಲಾಲ್‌ಬಾಗ್ ನೋಡಿದರು.
ಸುನಂದಾ ಮಗುವಿನೊಡನೆ ತನ್ನ ಮನೆಯ ಆವರಣದ, ತನ್ನ ಯೋಚನೆಗಳ,
ಪುಟ್ಟ ಪ್ರಪಂಚದಲ್ಲೇ ದಿನ ಕಳೆದಳು.
ಆಕೆಯ ಗಂಡ ಈಗೀಗ ಸಂಜೆ ಮನೆಗೆ ಬರುತ್ತಿರಲಿಲ್ಲ. ಬಂದು ಮತ್ತೆ ಹೊರ
ಡುವುದೇಕೆಂದು ಒಂದೇ ಸಾರೆ ಮರಳುತ್ತಿದ್ದ. ಮನೆಯ ವಾತಾವರಣಕ್ಕೆ ಆತ ಎಂದೂ
ಹೊಂದಿಕೊಳ್ಳುತ್ತಿರಲಿಲ್ಲ. ಮಗುವನ್ನು ಎತ್ತಿ ಮುದ್ದಿಸುತ್ತಿರಲಿಲ್ಲ. ಗೃಹಕೃತ್ಯಕ್ಕೆ
ಸಂಬಂಧಿಸಿದ ಅನಿವಾರ್ಯವಾದ ಕೆಲವು ಪದಗಳನ್ನು ಬಿಟ್ಟು ಬೇರೇನನ್ನೂ ಆತ ಆಡು
ತ್ತಿರಲಿಲ್ಲ.
ಆತ ದಿನವೂ ಧರಿಸುತ್ತಿದ್ದುದು, ಈ ಮನೆಗೆ ತಾನು ಪರಕೀಯನೆಂಬ ಮುಖ
ವಾಡ. ಆ ಮುಖವಾಡದ ಹಿಂದೆ ಏನಿತ್ತೆಂಬುದನ್ನು ತಿಳಿಯುವುದು ಬಲು ಕಷ್ಟ
ವಾಗಿತ್ತು. ಆದರೂ ಆತನ ಚಲನವಲನಗಳನ್ನು ಬಲು ಸೂಕ್ಷ್ಮವಾಗಿ ಸುನಂದಾ
ನಿರೀಕ್ಷಿಸಿದಳು. ಒಮ್ಮೊಮ್ಮೆ ಮನೆಗೆ ಬಂದವನು ಬೇಗನೆ ದೀಪ ಆರಿಸಿ ಮಲಗುತ್ತಿದ್ದ.
ಅಂತಹ ದಿನಗಳಲ್ಲಿ ಬಹಳ ಹೊತ್ತು ಆತ ನಿದ್ದೆ ಹೋಗುತ್ತಿರಲಿಲ್ಲವೆಂಬುದು ಆಕೆಗೆ
ಗೊತ್ತಿತ್ತು. ಕೆಲವೊಮ್ಮೆ ಎಷ್ಟು ಹೊತ್ತಾದರೂ ಮಲಗದೆ ದೀಪವನ್ನು ಉರಿಯ
ಬಿಟ್ಟು, ಯಾವುದಾದರೂ ಬಲು ಅಗ್ಗದ ಇಂಗ್ಲಿಷ್ ಕಾದಂಬರಿಯನ್ನು ಓದುತ್ತಲೋ
ಓದಲು ಯತ್ನಿಸುತ್ತಲೋ ಇರುತ್ತಿದ್ದ. ದೀಪ ಆರಿಸಿದ ದಿನ ಆತನ ಮನಸ್ಸು ಹೆಚ್ಚು