ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

50

ಕನಸು

ಆ ಮಾತು ಸತ್ಯವಾಗಿತ್ತೆಂಬುದು ಸುನಂದೆಗೆ ಮನವರಿಕೆಯಾಗಿತ್ತು. ಮಗುವಿನ
ಪೋಷಣೆಯ ಭಾರ ತನ್ನ ಮೇಲಿದೆ ಎಂಬುದನ್ನೂ ಮರೆತು ಈ ನಡುವೆ ಆಕೆ ವರ್ತಿ
ಸಿದ್ದಳು. ತಾನು ಮಗುವಿನ ಯೋಚನೆಯನ್ನು ಸದಾ ಕಾಲವೂ ಮಾಡಬೇಕು. ಅದು
ನ್ಯಾಯ. ಆದರೆ ಮಗುವಿನ ತಂದೆಗೆ ಅಂಥ ಯೋಚನೆ ಸ್ವಲ್ಪವಾದರೂ ಇತ್ತೆ?
“ಅವರಿಗೆ ಮಗೂನ ಕಂಡರಾಗಲ್ಲ ರಾಧಮ್ಮ. ಇದು ಕಣ್ಣು ಮುಚ್ಚಿದರೇ
ಅವರಿಗೆ ಸಂತೋಷ ಅಂತ ಕಾಣುತ್ತೆ.”
“ಶ್!” ಎಂದರು ರಾಧಮ್ಮ ; “ಕೆಟ್ಟ ಮಾತಾಡ್ಬೇಡಿ.”
ಹಾಗೆ ಹೇಳಿದರೂ ಅವರ ಒಳ ಧ್ವನಿ, ಸುನಂದೆ ಹೇಳಿದುದೇ ನಿಜವಿರಬೇಕು
ಎಂದಿತು. 'ಪಾಪಿ!' ಎಂಬ ಪದ, ಕುಣಿಯುತ್ತ ನಾಲಗೆಯ ತುದಿಯವರೆಗೆ ಬಂದು
ಹೊರಗೆ ಬೀಳದೆ ಆ ತೇವದಲ್ಲಿ ಕರಗಿಹೋಯಿತು.
... ಸಂಜೆಯಾಯಿತೆಂದು ರಾಧಮ್ಮ ಎದ್ದರು. ಎದ್ದವರು ಮಗುವಿನತ್ತ ಬಾಗಿ
ನೋಡಿದರು. ಅವರ ಮುಖ ಅಗಲವಾಯಿತು.
“ನೋಡಿ ಸುನಂದಾ. ಮಗೂ ಮೈ ಬೆವತಿದೆ. ನೀವು ಪುಣ್ಯವಂತೆ ಕಣ್ರೀ.
ಮಗೂ ಉಳಕೊಂಡ್ತು...”
ಹೃದಯದ ಹೊರೆಯನ್ನೆಲ್ಲ ಆಗಲೆ ಇಳಿಸಿ ಹಗುರವಾಗಿದ್ದ ಸುನಂದಾ, ತಾನೂ
ಎದ್ದು ಬಂದು ಮಗುವನ್ನು ನೋಡಿದಳು. ಹೆರಿಗೆಯಾದ ಮೇಲೆ ಮಗುವನ್ನು ನೋಡಿ
ದಾಗ ಆಗಿದ್ದ ಸಂತೋಷವೇ ಈಗಲೂ ಆಕೆಗೆ ಆಯಿತು.
“ದೇವರೆ ಮುಂದೆ ದೀಪ ಹಚ್ಚಿಡಿ ಸುನಂದಾ"
__ಎಂದರು ರಾಧಮ್ಮ.
ಸುನಂದಾ, ಅಡುಗೆ ಮನೆಯ ಮೂಲೆಯಲ್ಲಿದ್ದ ದೇವರೆಡೆಗೆ ನಡೆದು ಆ ಕೆಲಸ
ಮಾಡಿದಳು. ಕ್ಷೀಣವಾಗಿದ್ದ ಆಕೆಯ ಕೈ ಬೆರಳುಗಳು ಕಡ್ಡಿ ಕೊರೆದಾಗ ನಡುಗಿದುವು.
ಯಾವ ಯೋಚನೆಯೂ ಇಲ್ಲದೆ ದೇವರಿಗೆ ಕೈ ಮುಗಿದಾಗ, ಕಡು ಬೇಸಗೆಯಲ್ಲಿ ತಿಳಿ
ನೀರಿನಲ್ಲಿ ಎಂದು ಬಂದಹಾಗೆ ಆಕೆಯ ಹೃದಯ ನಿರ್ಮಲವಾಯಿತು.
ಪ್ರಾಯಶಃ ಸುನಂದಾ ಒಪ್ಪಲಾರಳೆಂದು ಗೊತ್ತಿದ್ದರೂ ರಾಧಮ್ಮ ಕೇಳಿದರು:
“ಸಾಯಂಕಾಲದ ಅಡುಗೇನೂ ನಮ್ಮಲ್ಲೇ ಮಾಡ್ತೀನಿ. ಆಗದೇ ಸುನಂದಾ?”
ಆಕೆ ನಿರೀಕ್ಷಿಸಿದ್ದ ಉತ್ತರವೇ ಬಂತು.
“ಬೇಡಿ ರಾಧಮ್ನೋರೆ. ಇಲ್ಲೇ ಏನಾದರೂ ಮಾಡ್ತೀನಿ. ಅವರೂ
ಬರ್ತಾರೆ.”
ಇಷ್ಟೆಲ್ಲ ಆದಮೇಲೆಯೂ ಗಂಡನ ಬಗೆಗೆ ಸುನಂದಾ ತೋರಿಸುತ್ತಿದ್ದ ಪ್ರೀತಿ
ಯನ್ನು ಕಂಡು ರಾಧಮ್ಮ ಉಗುಳುನುಂಗಿದರು.
“ಹಾಗೇ ಆಗಲಮ್ಮ. ನಿಮ್ಮನೇಲಿ ತರಕಾರಿ ಏನೂ ಇಲ್ಲಾಂತ ಕಾಣಿಸುತ್ತೆ.
ನಮ್ಮಲ್ಲಿ ಸೀಮೆಬದನೆಕಾಯಿ ಇದೆ. ತಂದುಕೊಡ್ಲಾ?”