ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

53

ಹಾದಿ ಮಾಡಿಕೊಟ್ಟುವು.
ಕೆಂಪಗಾಗಿತ್ತು ಮುಖ. ಕಣ್ಣುಗಳನ್ನು ಮತ್ತು ಆವರಿಸಿತ್ತು.
'ಮಗೂಗೆ ಹೇಗಿದೆ?'
-ಎಂದು ಆತ ಕೇಳಲಿಲ್ಲ.
ಬದಲು, ಸುನಂದೆ ರಾಧಮ್ಮ ಇಬ್ಬರನ್ನೂ ನೆಟ್ಟ ದೃಷ್ಟಿಯಿಂದ ನೋಡುತ್ತ
ಆತನೆಂದ:
“ಮಾತನಾಡ್ತಾ ಇದ್ದೀರಿ. ನಾನು ಬಂದು ತೊಂದರೆಯಾಯ್ತೊ?”
ಸುನಂದಾ ತಲೆತಗ್ಗಿಸಿದಳು. ರಾಧಮ್ಮನ ಎದೆ ಡವಡವನೆ ಹೊಡೆದುಕೊಂಡಿತು.
ಆದರೂ ದೃಢತೆಯಿಂದ ಅವರೆಂದರು:
“ಪರವಾಗಿಲ್ಲ. ಮಾತಿಗೇನು? ಜೀವಮಾನವೆಲ್ಲ ಪುರಸೊತ್ತಿದೆಯಲ್ಲ. ಸದ್ಯಃ
ಮನೆ ಇದೆ ಅನ್ನೋದು ನೆನಪಾಗಿ ನೀವು ಬಂದಿರಲ್ಲ-ಅದೇ ದೊಡ್ಡ ವಿಷಯ!”
ಕೊಠಡಿಯ ಒಳಹೋಗುತಿದ್ದ ಪುಟ್ಟಣ್ಣ ತಡೆದು ನಿಂತು ತಿರುಗಿ ನೋಡಿದ.
ಸುನಂದೆ ನಡುಗಿದಳು. ರಾಧಮ್ಮ ತನ್ನ ಪಕ್ಷವಹಿಸಿ ಮಾತನಾಡಿದರಲ್ಲಾ ಎಂಬ
ಸಂತೋಷದ ಭಾವನೆಯನ್ನು ಮುಂದೇನಾಗುವುದೋ ಎಂಬ ಭಯ ಹಿಸುಕಿಬಿಟ್ಟಿತು.
ಪುಟ್ಟಣ್ಣ ಗುಡುಗು ಧ್ವನಿಯಲ್ಲಿ ಕೇಳಿದ:
“ಏನಂದಿರಿ?”
ಸೆರಗನ್ನು ಬಲಗೈಯಲ್ಲಿ ಮತ್ತೂ ಗಟ್ಟಿಯಾಗಿ ಎದೆಯ ಮೇಲಕ್ಕೆ ಎಳೆದು
ಕೊಳ್ಳುತ್ತ ರಾಧಮ್ಮ ಹೇಳಿದರು:
“ಸಾಕು ಗಂಡಸ್ತನ ತೋರಿಸೋದು! ಮನೇಲಿ ಮಗು ಕಾಹಿಲೆ ಮಲಗಿ ಪ್ರಾಣ
ಬಿಡ್ತಾ ಇದ್ದರೂ ಮನೆಬಿಟ್ಟು ನಿಶಾಚರನ ಹಾಗೆ ಅಲೀತಾ ಇದೀರಲ್ಲಾ, ನೀವೇನು
ಮನುಷ್ಯನೋ ಅಥವಾ—”
ರಾಧಮ್ಮನ ಮಾತು ಒಮ್ಮೆಲೆ ನಿಂತು ಹೋಯಿತು; ಮೇರೆಮೀರಿ ತಾನು
ಆಡುತ್ತಿರುವೆನೆಂಬ ಭಯ ಹದ್ದಿನ ಹಾಗೆ ಇಳಿದು ಬಂದು ಉಳಿದ ಮಾತನ್ನು ಕುಟುಕಿ
ತೆಗೆಯಿತು.
ಪುಟ್ಟಣ್ಣ ಮಾತನಾಡಲಿಲ್ಲ. ಅನಂತ ಕಾಲವೋ ಎನ್ನುವಹಾಗೆ ಒಂದು ನಿಮಿಷ
ಕಳೆಯಿತು.
ಕೋಟು ಬಿಚ್ಚಿ ಕುರ್ಚಿಯ ಮೇಲೆಸೆದು ಪುಟ್ಟಣ್ಣ, ಆಶ್ಚರ್ಯಕರವೆನ್ನಿಸುವಷ್ಟು
ಶಾಂತವಾದ ಧ್ವನಿಯಲ್ಲಿ ಹೇಳಿದ:
“ರಾಧಮ್ಮ. ನಿಮ್ಮ ಯಜಮಾನರು ರಾಮಯ್ನೋರು ಕರೀತಿದಾರೆ,
ಹೋಗೀಮ್ಮ.”
ಕಠಿನವಾದ ಬೇರೇನಾದರೂ ಮಾತನ್ನು ಆತ ಆಡಿದ್ದರೆ ರಾಧಮ್ಮನಿಗೆ ಅಷ್ಟು
ಸಂಕಟವಾಗುತ್ತಿರಲಿಲ್ಲ. ಆದರೆ ಈ ವ್ಯಂಗ್ಯ ಮಾತಿನಿಂದ ಆಕೆಗೆ ಅವಮಾನವಾಯಿತು.