ಪುಟ:ಪಾಲಿಗೆ ಬಂದ ಪಂಚಾಮೃತ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

54

ಕನಸು

ಅವಮಾನಿತರಾದ ರಾಧಮ್ಮನ ಕಣ್ಣುಗಳಲ್ಲಿ ಹನಿಯಾಡಿತು.
ಅವರು ದಡದಡನೆ ಮೆಟ್ಟಲಿಳಿದು ತಮ್ಮ ಮನೆಗೆ ಹೊರಟುಹೋದರು.
ಪುಟ್ಟಣ್ಣ ಹೊರಗಿನ ಬಾಗಿಲು ಮುಚ್ಚಿ ಅಗಣಿ ಹಾಕಿ ಹೆಂಡತಿಯತ್ತ ತಿರುಗಿದ.
ಅಲ್ಲೇ ನಿಂತಿದ್ದ ಆಕೆಯನ್ನು ತನ್ನ ಕೊಠಡಿಗೆಳೆದ. ಆಕೆಯ ಕೈಯ ಮಣಿಗಂಟನ್ನು
ಹಿಡಿದು ತಿರುವಿ, ಮಂಚದಮೇಲೆ ಕುಕ್ಕರಿಸಿ ಬೀಳುವಂತೆ ಮಾಡಿದ. ಒಮ್ಮೆ ನೋವಿ
ನಿಂದ “ಆಯ್!” ಎಂದಳು ಸುನಂದಾ. ಒಮ್ಮೆ ಮಾತ್ರ. ಮತ್ತೆ ಆಕೆ ರೋದಿಸಲಿಲ್ಲ.
ಔಡುಗಚ್ಚಿ, ತನ್ನ ದಾಂಪತ್ಯ ಜೀವನದಲ್ಲಿ ಮೊದಲ ಬಾರಿಗೆ, ಗಂಡನ ಕೈಯಲ್ಲಿ ಹೊಡೆತ
ತಿಂದಳು; ಪಾದಗಳಿಂದ ಒದೆಸಿಕೊಂಡಳು.
ಪಶುವಾಗಿದ್ದ ಆ ಗಂಡಸು ಹೊಲಸು ಮಾತುಗಳನ್ನಾಡಿದ. ಅವಾಚ್ಯ ಪದಗಳು.
ಆತನದೊಂದೇ ಆಕ್ರೋಶ-ತನ್ನ ಮಾನ ಕಳೆಯಲು ಆ ಹೆಂಡತಿ ಯತ್ನಿಸಿದಳೆಂದು.
“ಬೊಗಳು ಬೋ-ಮಗಳೇ! ಏನು ಹೇಳ್ದೆ ನಿನ್ನ ಸ್ನೇಹಿತೆಗೆ?” ಇಷ್ಟು ಶಿಕ್ಷೆ ಸಾಲದೆಂದು
ಮತ್ತೆ ಬೆದರಿಕೆ: “ಬಾಯಿ ತೆರೆದರೆ ನಿನ್ನ ಚರ್ಮ ಸುಲಿದೇನು! ಈ ಮನೇಲಿರ
ಬೇಕಾದರೆ ನೀನು ನಾಯಿಯ ಹಾಗೆ ಬಿದ್ದಿರಬೇಕು! ಇಲ್ದೇ ಹೋದರೆ ಒದ್ದು ಹೊರ
ಹಾಕ್ತೀನಿ!”
ಏಟುಗಳ ಹಿಂಸೆ ಸಹಿಸುವುದಾಗದೇ ಹೋದಾಗ ಸುನಂದಾ ಆತನ ಹಾಸಿಗೆಯ
ಮೇಲೆ ಬಿದ್ದು ಕೊಂಡಳು. ಆತ, ಆಕೆಯನ್ನೆಳೆದು ನೆಲಕ್ಕೆ ಕೆಡವಿದ.
ದಂಡಿಸಿ ಶಕ್ತಿಗುಂದಿ ಆ ಗಂಡಸು ಸುಮ್ಮನಾಗಲು ಸ್ವಲ್ಪ ಹೊತ್ತು ಹಿಡಿಯಿತು.
ಕೊನೆಗೆ ಆತ ಕಿರಿಚಿದ:
“ಹೊರಟು ಹೋಗು ಆಚೆಗೆ!”
ಬಲು ಪ್ರಯಾಸ ಪಟ್ಟು ಸುನಂದಾ ಮೆಲ್ಲನೆದ್ದು ಒಳ ಹಜಾರಕ್ಕೆ ನಡೆದು ತನ್ನ
ಹಾಸಿಗೆಯ ಮೇಲೆ ಒರಗಿಕೊಂಡಳು. ದಿಂಬನ್ನು ಬಾಯಲ್ಲಿ ಕಚ್ಚಿ ಆಕೆ ಅಳಲು ಯತ್ನಿಸಿ
ದಳು. ಆದರೆ ಅಳು ಸುಲಭವಾಗಿ ಬರಲಿಲ್ಲ.

****

....ಮನೆ ಸೇರಿದ ರಾಧಮ್ಮ ಕಿಟಿಕಿಯ ಬಳಿ ನಿಂತು ಸುನಂದೆಯ ಮನೆಯತ್ತ
ನೋಡುತ್ತಲೇ ಇದ್ದರು. ಆ ಕೊಠಡಿಯಲ್ಲಿ ಏನಾಗುತ್ತಿತ್ತೆಂಬುದನ್ನು ಊಹಿಸುವುದು
ಆಕೆಗೆ ಕಷ್ಟವಾಗಲಿಲ್ಲ. ಕೇಳಿಸುತ್ತಿದ್ದುದು ಆತ ಹೊಡೆಯುತ್ತಿದ್ದ ಸದ್ದುಮಾತ್ರ.
ಆಕೆಯ ರೋದನವೇ ಇಲ್ಲ. 'ಪಾಪಿ ಉಸಿರು ಕಟ್ಟಿಸಿ ಸಾಯಿಸಿಯೇ ಬಿಟ್ಟನೇನೋ'
ಎಂದು ಅವರಿಗೆ ಭಯವಾಯಿತು.
“ನೋಡೀಂದ್ರೆ ಆತ ಮಾಡ್ತಿರೋದು”
__ಎಂದು ಗಂಡನನ್ನು ಆಕೆ ಕರೆದರು.
ಆತನೂ ಬಂದು ಕಿಟಿಕಿಯ ಬಳಿ ನಿಂತರು.
ಆದರೆ ಸ್ವಲ್ಪ ಹೊತ್ತಿನಲ್ಲೇ ಪುಟ್ಟಣ್ಣನ ಕೊಠಡಿಯ ದೀಪ ಆರಿತು.