ಪುಟ:ಪಾಲಿಗೆ ಬಂದ ಪಂಚಾಮೃತ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

80

ಕನಸು

ಅಲ್ವಂತೆ....ಅದೇನೋ ರಾಗವಾಗಿರುತ್ತಲ್ಲ-ಕೊಂಕಣಿ ಅಂತಾನೋ—”
“ತಿಳೀತು ರಾಧಮ್ಮ. ಅವರು ಸಾರಸ್ವತರಿರಬೇಕು ಹಾಗಾದರೆ. ಆವತ್ತು
ನೋಡಿದಾಗಲೇ ಸಂಶಯ ಬಂದಿತ್ತು. ಅವರಿಗೆಲ್ಲ ಕನ್ನಡವೂ ಬರುತ್ತೆ.”
“ಆಹಾ? ಹಾಗಾದರೆ ಯಾವತ್ತು ದಾಳಿ ಮಾಡೋಣ?"
ಸುನಂದೆಯ ಮುಖ ಬಾಡಿತು. ಹಾಗೆ ಸ್ನೇಹಿತರನ್ನು ಸಂಪಾದಿಸಿಕೊಳ್ಳುವ,
ತನ್ನ ಮನೆಗೆ ಬೇರೆಯವರನ್ನು ಕರೆಯುವ, ಕಾಫಿ ಕೊಡುವ ಭಾಗ್ಯ ಆಕೆಗಿತ್ತೆ?
ಸುನಂದಾ ಉಲ್ಲಾಸವಾಗಿರಲೆಂದೇ ರಾಧಮ್ಮ ಆ ಪ್ರಶ್ನೆಯನ್ನು ಕೇಳಿದ್ದಳು.
ಆದರೆ ಅದು ಗುರಿ ತಪ್ಪಿತು.
“ನೀವು ಬೇಕಾದರೆ ಪರಿಚಯ ಮಾಡ್ಕೊಳ್ಳಿ ರಾಧಮ್ಮ. ನನಗೊಂದೂ ಬೇಡ.”
ಆ ಕುಟುಂಬ ಜೀವನಕ್ಕೋಸ್ಕರ ಎಷ್ಟೊಂದು ಬೆಲೆ ಕೊಟ್ಟಿದ್ದಳು ಆಕೆ_
ಎಷ್ಟೊಂದು ಬೆಲೆ! ಆ ಯಜ್ಞದಲ್ಲಿ ಆಕೆಯ ಆಸೆ ಆಕಾಂಕ್ಷೆಗಳೆಲ್ಲ ಸುಟ್ಟುಹೋಗಿದ್ದವು.
ಎಲ್ಲ ಬಣ್ಣವನ್ನೂ ಮಸಿ ನುಂಗಿದ ಹಾಗೆ, ಆವರೆಗಿನ ಆಕೆಯ ಬೆಳವಣಿಗೆಯನ್ನೆಲ್ಲ ಇಲ್ಲ
ವೆನಿಸಿತ್ತು ಆಗಿನ ಬದುಕು. ಈಗ ಆಕೆ, ಸ್ವಂತ ವ್ಯಕ್ತಿತ್ವವೇ ಇಲ್ಲದ ಗುಟುಕುಜೀವನ
ವನ್ನಷ್ಟೆ ಹಿಡಿದಿದ್ದ ಮನುಷ್ಯ ಪ್ರಾಣಿ-ಈಯದ ಸಾಯದ ಹಸುವಿದ್ದ ಹಾಗೆ.
ಮನೆಯ ಬಾಗಿಲಿಗೆ ಬಂದರೆ ಸಾಕು, ಎದುರಿನ ದೊಡ್ಡ ಮನೆಯ ಸುಖಸಂಸಾರ
ತನ್ನ ಅರ್ಥಹೀನ ಇರುವಿಕೆಯನ್ನು ಆಕೆಗೆ ನೆನಪು ಮಾಡಿ ಕೊಡುತ್ತಿತ್ತು. ಮನಸಿ
ನೊಳಗೇ ಕೇಳಿಸಿಕೊಂಡು ಸುನಂದಾ ಉತ್ತರಿಸುತ್ತಿದ್ದಳು: ತಾನು ಬಯಸುವುದೇನನ್ನು
ಹಾಗಾದರೆ? ಶ್ರೀಮಂತಿಕೆಯನ್ನೆ ? ಅಲ್ಲ-ಖಂಡಿತ ಅಲ್ಲ. ತನಗೆ ಬೇಕಾದುದು ದಾಂಪತ್ಯ
ಸುಖ, ಗಂಡು ಹೆಣ್ಣು ಅನ್ಯೋನ್ಯವಾಗಿರುವ ಬದುಕು. ಎದುರು ಮನೆಯ ಸಂಸಾರ
ದಲ್ಲಿ ಅದು ಇದೆ ಎನ್ನುವ ಭರವಸೆ ಏನು? ನೋಡಿದರೆ ಗೊತ್ತಾಗುವುದಿಲ್ಲವೇನೋ?
....ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ. ಅದು ನಿಜ, ಆದರೂ ತಾನು ಕುರುಡಿ ಅಲ್ಲವಲ್ಲ.
ತಾನು ತಾಯಿಯಾಗುವುದಕ್ಕೆ ಮೊದಲು ಒಂದು ರೀತಿಯಲ್ಲಿ ಅಂತಹ ಸುಖ ತನಗೂ
ಇತ್ತು. ತಾಯಿಯಾದ ಮೇಲೆ ಆ ಹೆಣ್ಣು ಕೂಡ—....
ಆ ಯೋಚನೆಯ ಕ್ರೂರವಾಗಿತ್ತು, ಮೈ ಮುಳ್ಳಾಗುವಷ್ಟು. 'ಹಾಗಾಗದಿರಲಿ,
ಹಾಗಾಗದಿರಲಿ!' ಎಂದು ಸುನಂದಾ ತನ್ನಷ್ಟಕ್ಕೆ ಅಂದುಕೊಂಡಳು.
ತನ್ನ ಗಂಡ ರಾತ್ರಿ ತಡವಾಗಿ, ಮನುಷ್ಯನಲ್ಲದ ಮನುಷ್ಯನಾಗಿ ಮನೆಗೆ ಬರು
ತ್ತಿದ್ದ. ಆ ಹೆಣ್ಣಿನ ಗಂಡ ಸಂಜೆಯೇ ಹಿಂತಿರುಗಿ, ಮನೆಯ ಸುತ್ತಲಿನ-ಮಹಡಿಯ
ಮೇಲಿನ-ಪುಟ್ಟ ಉದ್ಯಾನದ ಆರೈಕೆ ಮಾಡುತ್ತಿದ್ದ, ಹೆಂಡತಿಯೊಡಗೂಡಿ. ಅಂಗಡಿಯ
ಉಸ್ತುವಾರಿಯನ್ನು ಕೆಳನೌಕರರ ವಶಕ್ಕೊಪ್ಪಿಸಿ ಬರುತ್ತಿದ್ದನೇನೋ...ಒಂದೊಂದು
ಸಂಜೆ ಇಬ್ಬರೂ ನಡೆದು ಹೋಗುತ್ತಿದ್ದರು, ವಿಹಾರಕ್ಕೆ. ಒಮ್ಮೊಮ್ಮೆ ಕಾರಿನಲ್ಲಿ,
ನೆಲಕ್ಕೆ ಮುಟ್ಟಿಕೊಂಡೇ ಇರುವರೇನೋ ಎನ್ನುವಂತೆ, ಜತೆಯಾಗಿ ಹೊರಡುತ್ತಿದ್ದರು:
ಪ್ರಾಯಶಃ ಸಿನಿಮಾ ನೋಡಲು, ಇಲ್ಲವೆ ಸಂಗೀತಕ್ಕೆ, ಅಥವಾ ಗೆಳೆಯರ ಮನೆಗಳಿಗೆ.