ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦ | ಪ್ರಸ್ತುತ
ಸ್ವರೂಪದ, ಕಲಾಪ್ರಕಾರಗಳನ್ನು 'ತಿದ್ದು' ವುದಾಗಲಿ ಬದಲಾಯಿಸುವುದಾಗಲಿ ಸಲ್ಲದೆಂಬ ವಾದವೂ ಇದೆ. ಈ ವಾದದಲ್ಲಿ ಅಂಶತಃ ಸತ್ವವೂ ಇದೆ. ಪ್ರಾಚೀನ ಕಲೆಯ ಸ್ವರೂಪ-ಅಂದರೆ, ಉದಾ: ಯಕ್ಷಗಾನದ ವೇಷ, ಗಾಯನ, ಅಭಿವ್ಯಕ್ತಿ, ತಂತ್ರಗಳ ಶೈಲಿ-ವನ್ನು ಕೆಡಿಸಬಾರದೆಂಬ ಅರ್ಥದಲ್ಲಿ ಈ ವಾದವು ಸರಿ. ಯಕ್ಷಗಾನದಂತಹ ಅತ್ಯಂತ ಕಲಾತ್ಮಕ ರೂಪ (Form) ವುಳ್ಳ ಕಲೆಯನ್ನು ಆಧುನಿಕತೆಯ ಹೆಸರಲ್ಲಿ ಪರಿವರ್ತಿಸಬಾರದು; ವಿಕಾರಗೊಳಿಸಬಾರದು. ಶೈಲಿಬದ್ಧ ಕಲೆಗಳಲ್ಲಿ, ಗುಣಮಟ್ಟದ ನಿರ್ಧಾರಕ್ಕೆ, ಔಚಿತ್ಯ ನಿರ್ಣಯಕ್ಕೆ ಶೈಲಿಯು ಒಂದು ಮುಖ್ಯವಾದ ಮಾನದಂಡ ವಾಗಿದೆ. ಶೈಲಿಯ ಲಕ್ಷಣಗಳನ್ನೆ ಆಧರಿಸಿದ ಸೃಷ್ಟಿ ಮಾತ್ರ ಇಲ್ಲಿ ನಾವೀನ್ಯವೆಂಬ ಹೆಸರಿಗೆ ಅರ್ಹವೇ ಹೊರತು, ರೂಪವನ್ನು ಬಿಟ್ಟುಕೊಟ್ಟ ರಚನೆಯಲ್ಲ. ಇಷ್ಟು ಸರಿ. ಆದರೆ, ಆಶಯದಲ್ಲಾಗಲಿ ವಸ್ತುವಿನ ನಿರ್ವಹಣೆಯಲ್ಲಾಗಲಿ ಆಧುನಿಕ ಸಾಂಸ್ಕೃತಿಕ ಭಾವಕ್ಕೆ, ಮೌಲ್ಯಾತ್ಮಕವಾದ ಮುನ್ನೋಟಕ್ಕೆ ಸಾಂಪ್ರದಾಯಿಕ ಕಲೆಯು ಹೊರತಾಗಿರಬೇಕೆಂಬ ವಾದವು ತರ್ಕಸಮ್ಮತವಲ್ಲ. ಕೇವಲ ಸೀಮಿತ ಆಶಯ ಮತ್ತು ಸಾಧ್ಯತೆಯುಳ್ಳ ಸುಗ್ಗಿ ಕುಣಿತದಂತಹ ಒಂದು ಪ್ರಕಾರದಲ್ಲಿ ಪ್ರಸ್ತುತತೆಯ ಪ್ರಶ್ನೆ ಅಸಂಗತವಾಗಬಹುದು, ಹೊರತು ಅಪಾರ ಸಾಧ್ಯತೆಗಳುಳ್ಳ ಯಕ್ಷಗಾನದಂತಹ ಕಲೆಗಳ ಸಂದರ್ಭದಲ್ಲಿ ಅಲ್ಲ.
ಯಕ್ಷಗಾನದಂತಹ ಕಲೆಯಲ್ಲಿ ಪ್ರದರ್ಶಿತವಾಗುವ ಕಥಾನಕ, ಅದರ ವಸ್ತು, ಅದು ತೋರ್ಪಡಿಸುವ ಮೌಲ್ಯ ವಿಚಾರಗಳು ನಮ್ಮ ಕಾಲಕ್ಕೆ ಅಸಂಗತ ಮತ್ತು ಪ್ರತಿ ಗಾಮಿಗಳಾಗಿವೆ, ಎಂಬುದಕ್ಕೆ ಇದಿರಾಗಿ ಇನ್ನೊಂದು ಪ್ರತಿವಾದ ಶಕ್ಯವಿದೆ. ಅದೆಂದರೆ, ಯಕ್ಷಗಾನದ ಕವಿ, ಯಕ್ಷಗಾನ ಪ್ರಸಂಗವನ್ನು ಬರೆದ ಕರ್ತೃ ಮತ್ತವನ ಆಕರವಾದ ಪುರಾಣಾದಿಗಳ ಕರ್ತೃ, ಚಿತ್ರಿಸಿದುದನ್ನ ನಾವು ಪ್ರದರ್ಶಿಸುತ್ತಿದ್ದೇವೆ. ಮತ್ತುನೋಡುತ್ತೇವೆ. ಅದು ಆ ಕಾಲದ ಚಿತ್ರಣ ಅಷ್ಟೆ. ನಮ್ಮಒಪ್ಪಿಗೆ ಯಾ ಭಿನ್ನಾ ಭಿಪ್ರಾಯವು ಇಲ್ಲಿ ಮುಖ್ಯವಲ್ಲ. ಅವರ ಕೃತಿಯ ಆಶಯಕ್ಕೆ ನಾವು ಹೂಣೆಗಾರರೂ ಅಲ್ಲ. ಮತ್ತು ಅದನ್ನು ಆಧುನಿಕಗೊಳಿಸಲು ಬದ್ಧರೂ ಅಲ್ಲ. ಅದು, ಹಾಗಿದೆ. ಹಾಗಿರುತ್ತದೆ. ಅಷ್ಟೆ. ಸಂಗೀತ ಕಚೇರಿಯಲ್ಲಿ, ನಾವು ಭಕ್ತಿಯ ಹಾಡೊಂದನ್ನು ಅಥವಾ ನೃತ್ಯದಲ್ಲಿ ದೇವರ ಮಹಿಮೆಯ ಒಂದು ವಸ್ತುವನ್ನು, ನಿರ್ಲಿಪ್ತವಾಗಿ ರಂಜನೆಯ ದೃಷ್ಟಿಯಿಂದ ಮಾತ್ರ ನೋಡುವುದಿಲ್ಲವೆ? ನಾವದನ್ನು ಒಪ್ಪುತ್ತೇವೆಂದು ಅರ್ಥವಲ್ಲವಷ್ಟೆ? ಉದಾಹರಣೆಗೆ ಹೇಳುವುದಾದರೆ, ಗೌತಮ ಬುದ್ಧನ ಬಗೆಗೆ ನಾಟಕವನ್ನು ಬರೆದವನೊಬ್ಬನು ಯಾ ಆಡುವ, ಆಡಿಸುವವರು ಬೌದ್ಧ ಮತವನ್ನು ಒಪ್ಪುತ್ತಾರೆಂದೇನು ಇಲ್ಲವಷ್ಟೆ? ಇದು ಒಂದು ಅಭಿಪ್ರಾಯ.
ನಮ್ಮ ಮಾನಸಿಕ ಸಂವೇದನೆಗಳು, ಧೋರಣೆಗಳು, ವಿಚಾರಗಳು ಸಂಸ್ಕಾರ ಗೊಂಡು ರೂಪುಗೊಂಡವುಗಳು. ನಮ್ಮ ಇತಿಹಾಸ, ಪುರಾಣ, ಸಾಂಸ್ಕೃತಿಕ ಘಟಕ ಗಳು, ಆಧುನಿಕ ಸನ್ನಿವೇಶ ಎಲ್ಲವೂ ಸೇರಿ ನಮ್ಮ ಭಾವ, ವಿಚಾರ, ವಿವೇಕಗಳನ್ನು