ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಂಪ್ರದಾಯಿಕ ಕಲೆ: ಪ್ರಸ್ತುತತೆಯ ಪ್ರಶ್ನೆ

ಸಾಂಪ್ರದಾಯಿಕ ಅಥವಾ ಪಾರಂಪರಿಕ (Traditional) ರಂಗ ಕಲೆ ಯೊಂದರ ಪ್ರಸ್ತುತತೆ ಮತ್ತು ಸಾಧ್ಯತೆಗಳ ಬಗೆಗೆ ಕೆಲವು ಅಂಶಗಳನ್ನು ಪರಿಶೀಲಿ ಸಲು ಯತ್ನಿಸುವುದು ಈ ಟಿಪ್ಪಣಿಯ ಲಕ್ಷ್ಯ, ನಮ್ಮಲ್ಲಿ ಬಳಕೆಯಲ್ಲಿರುವ ಹಲವು ರಂಗಪ್ರಕಾರಗಳ ಪರಿಶೀಲನೆಗೂ ಇಲ್ಲಿನ ವಿವೇಚನೆಯು ಅನ್ವಯವಾಗುವುದಾದರೂ, ನನ್ನೀ ಪರಿಶೀಲನೆಯು ಮುಖ್ಯವಾಗಿ ಕರಾವಳಿ ಪ್ರದೇಶದ ಯಕ್ಷಗಾನ ರಂಗಭೂಮಿ ಯನ್ನು ಆಧರಿಸಿದೆ. ಕರಾವಳಿಯ ಯಕ್ಷಗಾನವು, ಅದರ ಕೆಲವೊಂದು ಲಕ್ಷಣಗಳನ್ನು ಆಧರಿಸಿದ ವಿವೇಚನೆಯಿಂದ, ಮತ್ತು ಅನ್ಯ ಜಾನಪದ ರಂಗಕಲೆಗಳ ಸಾಮ್ಯದ ಆಧಾರದಿಂದ, ಜಾನಪದರಂಗವೆಂದೇ ರೂಢವಾಗಿ ಕರೆಸಿಕೊಳ್ಳುತ್ತಿದ್ದರೂ, ಅದರ ಒಟ್ಟು ಸ್ವರೂಪದ ಮೇಲಿನಿಂದ ಅದು ಶಾಸ್ತ್ರೀಯ ಸ್ವರೂಪದ ಕಲೆಯೇ ಆಗಿದೆ. ಹೀಗಾಗಿ, ಆಧುನಿಕ ಸ್ಪಂದನ ಮತ್ತು ಪ್ರಸ್ತುತತೆಯ (ರೆವಲೆನ್ಸ್) ಸಂದರ್ಭದಲ್ಲಿ ಈ ಕಲೆಯು, ಮೇಲ್ನೋಟಕ್ಕೆ ಅಂತಹ ಪರಿಷ್ಕಾರಕ್ಕೆ ಸುಲಭವಾಗಿ ಒದಗುವಂತಹ ದಲ್ಲ ಎಂಬ ಭಾವನೆಯೂ ಬರಬಹುದು. ಆದರೆ, ಜಾನಪದ ರಂಗಕಲೆಗಳಲ್ಲಿರುವ ಸರಳ, ಆದರೆ ಅರ್ಥಪೂರ್ಣ ತಂತ್ರ, ಅಭಿವ್ಯಕ್ತಿ ವಿಧಾನಗಳೂ, ಪರಿವರ್ತನೀಯ ತೆಯ (flexibility) ಇದಕ್ಕಿದೆ. ಅಷ್ಟೆ ಅಲ್ಲ, ಶಾಸ್ತ್ರೀಯವಾದ ಕಲೆ ಕೂಡ ಸುಯೋಜಿತವಾದ ಶ್ರದ್ಧಾಪೂರ್ಣವಾದ ಪ್ರಾಯೋಗಿಕತೆಯಿಂದ ಪ್ರಸ್ತುತವಾಗ ಬಲ್ಲುದು, ಆಗಬೇಕಾದುದು ಕೂಡ.

ಕಾಲಕ್ಕೆ ತಕ್ಕಂತೆ- ಎಂದರೆ ಕಾಲವು ಒಳಗೊಂಡಿರುವ ಸಮಾಜ, ಸಂಸ್ಕೃತಿ, ಮೌಲ್ಯ ವಿವೇಕ, ಆಶಯದೃಷ್ಟಿ, ಜ್ಞಾನವಿಜ್ಞಾನಗಳ ಪ್ರಗತಿಗಳಿಗೆ ತಕ್ಕಂತೆ ಕಲೆಗಳೂ ಬದಲಾಗಬೇಕು ಮತ್ತು ಬದಲಾಗುತ್ತವೆ ಎಂಬುದೊಂದು ಸಾರ್ವತ್ರಿಕ ವಿಚಾರ ಅಥವಾ ನಿಯಮ. ಆದರೂ, ಜಾನಪದ ಅಥವಾ ಶಾಸ್ತ್ರೀಯವಾದ, ಪ್ರಾಚೀನ