ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಿಕೆ

ಯಕ್ಷಗಾನಕ್ಕೆ ಸಂಬಂಧಿಸಿ ನಾನು ವಿವಿಧ ಸಂದರ್ಭಗಳಿಗಾಗಿ ಬರೆದ ಕೆಲವು ಪ್ರಬಂಧಗಳು ಇಲ್ಲಿ ಸಂಕಲಿತವಾಗಿ ಪ್ರಕಟವಾಗುತ್ತಿವೆ. ಇವುಗಳನ್ನು ನನ್ನಿಂದ ಬರೆ ಯಿಸಿದ ವಿವಿಧ ಸಂಸ್ಥೆಗಳಿಗೆ ನಾನು ಕೃತಜ್ಞನಾಗಿದ್ದೇನೆ.
ಈ ಸಂಕಲನಕ್ಕೆ ಅಭಿಮಾನಪೂರ್ವಕ ಮುನ್ನುಡಿಯನ್ನು ಬರೆದವರು ಮಿತ್ರರೂ, ಶ್ರೇಷ್ಠ ಕಲಾವಿದರೂ, ಪ್ರಜ್ಞಾವಂತ ವಿಮರ್ಶಕರೂ ಆದ ಶ್ರೀ ಎಂ. ಎಲ್. ಸಾಮಗ ಅವರು. ತಮ್ಮ ಸಹಜ ಗುಣವಾದ ಔದಾರ್ಯವನ್ನವರು ತಮ್ಮ ಬರಹದಲ್ಲಿ ತೋರಿಸಿದ್ದಾರೆ. ಅವರ ಪ್ರೀತಿ ದೊಡ್ಡದು.
ನನ್ನ ಕಲಾಪ್ರವೃತ್ತಿಗೂ, ವಿಮರ್ಶೆಯ ಕೆಲಸಕ್ಕೂ, ಪ್ರಚೋದನೆ, ಪ್ರೋತ್ಸಾಹಗಳನ್ನು ನೀಡುತ್ತ ಬಂದಿರುವ ನನ್ನ ಮಿತ್ರರು, ಸಹಕಲಾವಿದರು ಮತ್ತು ಸಹೋದ್ಯೋಗಿಗಳಿಗೂ, ಕಾಲೇಜು ಆಡಳಿತಕ್ಕೂ ನಾನು ಆಭಾರಿಯಾಗಿದ್ದೇನೆ.
ಈ ಕೃತಿಗೆ ಸುಂದರ ಮುಖಚಿತ್ರವನ್ನು ಬರೆದಿತ್ತವರು ಪ್ರತಿಭಾವಂತ ಚಿತ್ರ ಕಾರ ಗೆಳೆಯ ಶ್ರೀ ಗೋಪಾಡ್ಕರ್ ಅವರು. ಅವರಿಗೆ ವಂದನೆಗಳು.
ಪುಸ್ತಕವನ್ನು ತಮ್ಮ ಪ್ರಕಾಶನದ ಪ್ರಕಟನೆಯಾಗಿ ಹೊರತರುತ್ತಿರುವ ಪುತ್ತೂರು ಕರ್ನಾಟಕ ಸಂಘಕ್ಕೆ, ವಿಶೇಷತಃ ಅದರ ಮುಖ್ಯಸ್ಥರಾದ, ಸಾಹಿತ್ಯಕಾರ, ಗ್ರಂಥಪ್ರಕಾಶನಗಳಲ್ಲಿ ಬಹುಮೂಲ್ಯವಾದ ಕೆಲಸಗಳನ್ನು ಮಾಡುತ್ತ ಬಂದಿರುವ ಶ್ರೀ ಬೋಳಂತಕೋಡಿ ಈಶ್ವರ ಭಟ್ಟ ಮತ್ತು ಪ್ರೊ. ವಿ. ಬಿ. ಮೊಳೆಯಾರ ಅವರಿಗೆ ನಾನು ಋಣಿ. ಅಂದವಾಗಿ ಮುದ್ರಿಸಿ ಕೊಟ್ಟ ಪ್ರಸನ್ನ ಪ್ರೆಸ್ಸಿನವರಿಗೆ ಕೃತಜ್ಞತೆಗಳು.

ಎಂ. ಪ್ರಭಾಕರ ಜೋಶಿ


ಬೆಸೆಂಟ್ ಪದವಿಪೂರ್ವ ಕಾಲೇಜು
ಮಂಗಳೂರು - ೫೭೫ ೧೦೩

ಶ್ರೀರಾಮನವಮಿ ೧-೪-೧೯೯೩