ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

ಸಂಕ್ರಮಣದ ಸಂಕಟದಲ್ಲಿರುವ ನಮ್ಮ ಕರಾವಳಿ ಯಕ್ಷಗಾನವು ಹಲವು ವಿವಾದ, ಗೊಂದಲಗಳ ಕಲಾಕ್ಷೇತ್ರವಾಗುತ್ತಿದೆ. ಯಾವ ದಿಕ್ಕಿನಲ್ಲಿ ಸಾಗಿ ಬೆಳೆಯಬೇಕು, ಯಾವ ನಿಟ್ಟಿನಲ್ಲಿ ಬೆಳೆದು ಸಾಗಬೇಕು ಎನ್ನುವುದಕ್ಕೆ ಸರಿಯಾದ ದಿಕ್ಕೂಚಿ ಯಕ್ಷಗಾನದ ಇಂದಿನ ತೀವ್ರ ಅಗತ್ಯ. ಪರಸ್ಪರ ಸಂಬಂಧಿಗಳಾದ ಔಚಿತ್ಯ ಪ್ರಜ್ಞೆ, ರುಚಿಶುದ್ಧಿ ಹಾಗೂ ರಸಪ್ರಜ್ಞೆಗಳ ಕೊರತೆಯಿಂದಾಗಿ ಯಕ್ಷಗಾನವು ವಿಕಾರವಾಗಿ ಬೆಳೆಯುತ್ತಿದೆ; ಅದರೊಂದಿಗೆ ಸ್ವಂತಿಕೆಯ ಕಲಾಶ್ರೀಮಂತಿಕೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದೂ ಅಷ್ಟೆ ಸತ್ಯ. ಈ ಅಗತ್ಯ ಮತ್ತು ಕೊರತೆಗಳನ್ನು ಪೂರೈಸುವುದಕ್ಕೆ ಹಾಗೂ ತುಂಬಿಸುವುದಕ್ಕೆ ಶ್ರೀ ಪ್ರಭಾಕರ ಜೋಶಿಯವರು ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದಲೂ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲ ನನ್ನಂಥವರೆಲ್ಲ ತಿಳಿದಿರುವ ವಿಷಯ.

ಎಷ್ಟೋ ಉತ್ತಮ ವಿದ್ವಾಂಸರ ಯಕ್ಷಗಾನ ವಿಮರ್ಶೆಗಳು ಭಾಷಣ, ಚರ್ಚೆ ಮೊದಲಾದ ರೂಪಗಳಲ್ಲಿ ಈಗಾಗಲೆ ನಡೆದಿವೆ. ಆದರೆ ಯಕ್ಷಗಾನ ಅರ್ಥಗಾರಿಕೆಯಂತೆ ಅವೆಲ್ಲ ಆ ವರ್ತಮಾನ ಕಾಲದಲ್ಲಿ ಹುಟ್ಟಿ ಸಾವನ್ನು ಕಂಡಿವೆ, ಭವಿಷ್ಯತ್ತಿಗೆ ಅವು ಉಳಿದಿಲ್ಲ. ಈ ವರ್ಗದ ವಿಮರ್ಶೆಗಿಂತ ಭಿನ್ನವಾಗಿ, ಜೋಶಿಯವರ ವಿಚಾರಧಾರೆಗಳು, ವಿಮರ್ಶೆಗಳು ಗ್ರಂಥರೂಪದಲ್ಲಿ ಪ್ರಕಟವಾಗುತ್ತಿರುವುದು, ಅವರಿಗೆ ಸಾಹಸದ ಕೆಲಸವಾದರೂ, ನಮಗೆ ಸಂತೋಷದ ಸಂಗತಿ. ಈಗಾಗಲೆ ಪ್ರಕಟವಾಗಿರುವ ಅವರ ಯಕ್ಷಗಾನ ಕುರಿತಾದ ಪ್ರಬಂಧ ಸಂಕಲನಗಳು, 'ಜಾಗರ', 'ಕೇದಗೆ ಮತ್ತು `ಮಾರುಮಾಲೆ' - ಮತ್ತು ಅದೇ ಸಾಲಿಗೆ ಸೇರುವ ಈ ಕೃತಿ ಪ್ರಸ್ತುತ ಯಕ್ಷಗಾನ ವಿಮರ್ಶಾ ಪ್ರಪಂಚದ ಅಮೂಲ್ಯ ಕೃತಿಗಳೆನ್ನುವುದು ಉಪ್ಪೇಕ್ಷೆಯ ಮಾತಲ್ಲ. ಜೀವಂತ ಯಕ್ಷಗಾನರಂಗ ಭೂಮಿಯ ಅಂಗೋಪಾಂಗಗಳ ಸೂಕ್ಷ್ಮಾವಲೋಕನ, ಗಾಢವಾದ ಚಿಂತನ, ವಿಶಾಲವಾದ ಸಂಶೋಧನಾತ್ಮಕ ಹಾಗೂ ತೌಲನಿಕ ಅಧ್ಯಯನ, ವಿದ್ವಾಂಸರೊಡನೆ ಸಮಾಲೋಚನೆ, ಕಲಾವಿದರೊಂದಿಗೆ ಅಹರ್ನಿಶಿ ಒಡನಾಟ ಮತ್ತು ಚರ್ಚೆ, ಆಧುನಿಕ ವಿಶ್ಲೇಷಣಾತ್ಮಕ ವಿಮರ್ಶಾಶಿಸ್ತಿನ ಪ್ರಯೋಗ - ಇವುಗಳ ಫಲವಾದ ಜೋಶಿಯವರ ವಿಮರ್ಶಾಪ್ರಬಂಧಗಳು ಯಕ್ಷಗಾನ ರಂಗಭೂಮಿಯ ಸಮಗ್ರ ಸ್ವರೂಪ ನಿರ್ಣಯದ `ರಂಗ ಮೀಮಾಂಸೆ'ಯನ್ನು ರೂಪಿಸುತ್ತವೆ.

ಪ್ರಸ್ತುತ ಈ ಪುಸ್ತಕದಲ್ಲಿ ಹೆಚ್ಚಿನ ಲೇಖನಗಳು ಅಲ್ಲಲ್ಲಿ ನಡೆದ ವಿಚಾರ ಗೋಷ್ಠಿಗಳಿಗಾಗಿ ಬರೆದವುಗಳಾದ್ದರಿಂದ ಅವುಗಳಲ್ಲಿ ಸಾಂದರ್ಭಿಕ ಔಚಿತ್ಯ ಹೆಚ್ಚು ಎದ್ದು ಕಾಣುತ್ತದೆ. ಆದದ್ದರಿಂದಲೆ ಈ ಲೇಖನಗಳನ್ನು ಒಟ್ಟಾಗಿ ಓದುವಾಗ