ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಷಯ ಪುನರಾವರ್ತನೆ ಕೆಲವೊಮ್ಮೆ ತೋರುತ್ತದೆ. ಆದರೆ ಅದು ಯಕ್ಷಗಾನದ ಬಗ್ಗೆ ಜೋಶಿಯವರ ಮೂಲಭೂತವಾದ ಗ್ರಹಿಕೆಯನ್ನು ಒತ್ತಿ ಹೇಳುತ್ತದೆ. 'ಯಕ್ಷಗಾನವು ಶೈಲಿಬದ್ಧ ಕಲೆ. ಅದು ಪ್ರತಿಪಾದಿಸುವ ವಿಷಯಕ್ಕಿಂತಲೂ ಅದರ ಕಲಾರೂಪ ಮುಖ್ಯ' ಎಂಬುದನ್ನು ಅವರು ಹಲವು ಲೇಖನಗಳಲ್ಲಿ ಪ್ರತಿಪಾದಿಸುತ್ತಾರೆ. “ಉತ್ತರಕನ್ನಡ ಯಕ್ಷಗಾನ ಪರಂಪರೆ: ಕೆಲವು ನೋಟಗಳು', 'ಸೈದ್ಧಾಂತಿಕ ಖಚಿತತೆಯ ಆವಶ್ಯಕತೆ', 'ಕಲಾಸ್ವರೂಪ ಮತ್ತು ಅಭಿವ್ಯಕ್ತಿ ವಿಧಾನ' ಮೊದಲಾದ ಲೇಖನಗಳು ವಿಮರ್ಶಾ ವಲಯಗಳಿಗೆ, ಕಲೆಯ ಆಸ್ವಾದನೆಗೆ, ಸರಿಯಾದ ದಿಕ್ಸೂಚಿಗಳಂತಿವೆ; ಮೌಲ್ಯ ನಿರ್ಣಯದ ಮಾನದಂಡವನ್ನು ಪರಿಚಯಿಸುತ್ತವೆ.

ಯಕ್ಷಗಾನದ ವಿವಿಧ ಅಂಗಗಳ ಬಗ್ಗೆ ಬಿಡಿ ಬರಹಗಳು, ವಿಮರ್ಶಾ ಸಂಕಲನಗಳು, ಗ್ರಂಥಗಳು ಈಗಾಗಲೆ ಸಾಕಷ್ಟು ಪ್ರಕಟವಾಗಿವೆ. ಆದರೆ ಶ್ರೀ ಪ್ರಭಾಕರ ಜೋಶಿಯವರು ಡಾ। ಶಿವರಾಮ ಕಾರಂತರ ನಂತರ ಗಮನ ಸೆಳೆದ ಗಟ್ಟಿಯಾದ ವಿಮರ್ಶಕ ಕಲಾವಿದ, ವಿಮರ್ಶಕನ ಜವಾಬ್ದಾರಿಗಳಲ್ಲಿ ಒಂದಾದ correction of taste ಮತ್ತು creation of taste (ಸದಭಿರುಚಿಯ ಸೃಷ್ಟಿ) ಅನ್ನು ಜೋಶಿ ಯವರು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನುವುದು ಅವರ ವಿಮರ್ಶೆಗಳಲ್ಲಿ ಸ್ಪಷ್ಟವಾಗುತ್ತದೆ. ಅವರ ಅಭಿಪ್ರಾಯಗಳಲ್ಲಿರುವ ಸೈದ್ಧಾಂತಿಕ ಖಚಿತತೆ, ಬರಹಗಳ ವ್ಯಾಪಕತೆ, ವಿಷಯ ವೈಶಾಲ್ಯ, ವಿಷಯ ನಿರೂಪಣೆಯಲ್ಲಿ ಸಂಕ್ಷಿಪ್ತತೆ, ಆಧುನಿಕ ವಿಮರ್ಶಾ ಶಿಸ್ತಿನ ವಿಶ್ಲೇಷಣಾ ಕ್ರಮ, academic approach, ಸ್ವತಂತ್ರ ಶೈಲಿ- ಇತ್ಯಾದಿ ಗುಣಗಳಿಂದ ಜೋಶಿಯವರ ವಿಮರ್ಶೆಗಳು ಇತರ ಯಕ್ಷಗಾನ ವಿಮರ್ಶಾ ಗ್ರಂಥಗಳ ಮಧ್ಯೆ ವಿಶಿಷ್ಟ ಮತ್ತು ಮುಖ್ಯ ಸ್ಥಾನ ಪಡೆಯುತ್ತವೆ. ಯಕ್ಷಗಾನ ಕಲೆಯನ್ನು ಸೃಷ್ಟಿಸುವ ಕಲಾವಿದ ತಾನು ಪ್ರಬುದ್ಧನಾಗುವುದಕ್ಕೆ ಓದಲೇಬೇಕಾದ ಲೇಖನಗಳಿವು. ಅದಕ್ಕಿಂತಲೂ, ರಸಗ್ರಹಣ ಮಾಡುವ, ಕಲಾಭಿರುಚಿ ಎಂದರೇನೆಂದು ತಿಳಿದಿರಬೇಕಾದ, ಯಕ್ಷಗಾನ ಪ್ರೇಕ್ಷಕರು ಓದಿ ಮನನ ಮಾಡಬೇಕಾದ ವಿಮರ್ಶೆಗಳಿವು. ಯಕ್ಷಗಾನ ಪ್ರದರ್ಶನಗಳು ಬೆಳೆದ ಪ್ರಮಾಣದಲ್ಲಿ ವಸ್ತುನಿಷ್ಠ ವಿಮರ್ಶೆಯೂ ಬೆಳೆದಾಗ ಮಾತ್ರ ಯಕ್ಷಗಾನದ ಕ್ಷೇಮಾಭ್ಯುದಯವು ಸಾಧ್ಯ. (ಪ್ರೇಕ್ಷಕರಿಂದಾಗಿ ನಮ್ಮ ಆಟಗಳ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಪ್ರೇಕ್ಷಕರ ಬದಲಾದ ರುಚಿಯ ಮೇಲೆ ಜವಾಬ್ದಾರಿ ಹೊರಿಸುವ ಕಲಾವಿದರು ಮತ್ತು ಮೇಳದ ಯಜಮಾನರುಗಳು ಟೆಂಟ್‌ನ ಮುಂದೆ ಟಿಕೇಟು ಮಾರುವಾಗ ಜೊತೆಯಲ್ಲಿ ಯಕ್ಷಗಾನ ವಿಮರ್ಶಾ ಗ್ರಂಥಗಳನ್ನು ಮಾರಿದರೆ - ಜೋಶಿಯವರ ಪುಸ್ತಕಗಳ ಬಗ್ಗೆ ಪ್ರಚಾರ ಮಾಡಿದರೆ ಯಕ್ಷಗಾನಕ್ಕೆ ದೊಡ್ಡ ಸೇವೆ ಮಾಡಿದಂತೆಯೆ ಸರಿ.)

ಜೋಶಿಯವರ ಶೈಲಿ ಮತ್ತು ವಿಷಯ ನಿರೂಪಣ ವಿಧಾನ ಇತರ ಯಕ್ಷಗಾನ ವಿಮರ್ಶಕರಿಗಿಂತ ಭಿನ್ನವಾಗಿದ್ದು ತಮ್ಮ ವಿಶಿಷ್ಟತೆಯನ್ನು ಎತ್ತಿತೋರಿಸು