ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಾಂಪ್ರದಾಯಿಕ ಕಲೆ: ಪ್ರಸ್ತುತತೆಯ ಪ್ರಶ್ನೆ / ೨೧

ಬೇಕಾದ ಕೆಲಸ. ಇದು ಪುರಾಣಾಧೀನವಾದ ಮನಸ್ಸನ್ನು, ಮತೀಯ ಸೀಮಾಬದ್ದವಾದ ಕಲಾಸಂವೇದನೆಯನ್ನು ಬಿಡಿಸಿ, ಮುಕ್ತ ವಿಶಾಲ ಲೌಕಿಕ ಮಾನವ ಪ್ರಪಂಚಕ್ಕೆ, ಗಟ್ಟಿ ನೆಲದ ನೆಲೆಗೆ ತರುವ ಕೆಲಸ, ಮತ, ಭಕ್ತಿಗಳ ಅಧೀನವಾದ ಸಾಹಿತ್ಯ ರಚನೆಯನ್ನು “ಪರಾಧೀನ ಸರಸ್ವತಿ” ಎಂದು ಹಿರಿಯ ಚಿಂತಕ ದಿ| ಪು. ಗ. ಸಹಸ್ರಬುದ್ದೆ ಅವರು ಕರೆದಿದ್ದಾರೆ. ಕಲೆಗೆ ಪ್ರಸ್ತುತತೆ ತರುವ ಕೆಲಸ ಪರಾಧೀನ ಸರಸ್ವತಿಯ ಬಂಧನ್ನು ಬಿಡಿಸುವ ಕೆಲಸ. ಆಗ, ಹಲವು ಆವರಣ ಮತ್ತು ಬಂಧನಗಳನ್ನು ಇದಿರಿಸಿ ಹೊಂದಿಸಬೇಕಾಗುತ್ತದೆ.
ಹೀಗೆ ಮುಂದೆ ಬರುವ ಕೆಲಸದಲ್ಲಿ ಹಿಂದಕ್ಕೆ ಹೋಗುವ ಕೆಲಸವೂ ಸಾಕಷ್ಟಿದೆ. ಏಕೆಂದರೆ, ನಮ್ಮ ಭಕ್ತಿಯುಗದ ಮತ್ತು ಪುರಾಣಗಳ ಸೀಮಿತವಲಯಕ್ಕಿಂತ ಹಿಂದಣ ಕಾವ್ಯ, ನಾಟಕ, ದರ್ಶನಗಳ ಯುಗದ ಆಕರಗಳು ಹೆಚ್ಚಿನ ವ್ಯಾಪಕ ಲೌಕಿಕ ಪ್ರೇರಣೆಗಳನ್ನು ನೀಡಬಹುದು. ಭಾರತ ರಾಮಾಯಣಗಳ ಮುಖ್ಯಭಾವವು ಲೌಕಿಕ ಕಾವ್ಯತ್ವ (Secular poetry) ಹೊರತು, ಪುರಾಣ ಚಿತ್ರವಲ್ಲ. ದರ್ಶನಗಳ ಯುಗ ಚಿಂತನದ ಮುಕ್ತ ವಾತಾವರಣದ ಕಾಲ. ಇದು ನಮಗೆ ಪ್ರೇರಕವಾಗಬೇಕು. ಸಾಂಪ್ರದಾಯಿಕ ಕಲೆಯು ಪ್ರಾಚೀನ ವಸ್ತುವಿಗೆ, ಅಥವಾ ವಸ್ತು ಸ್ವರೂಪಕ್ಕೆ ಒಲವು ತೋರುವುದಾದರೂ, ನಮ್ಮ ಸಂಸ್ಕೃತಿಯ ಒಂದು ಘಟ್ಟಕ್ಕೆ ಅದೂ ಭಕ್ತಿಯುಗದ ನೆಲೆಗಳಿಗೇ, ಅದು ಆತುಕೊಳ್ಳಬೇಕಿಲ್ಲ. ಕಲೆಯ ಇತಿಹಾಸದಲ್ಲಿ ಅದು ಒಂದು ಘಟ್ಟ ಮಾತ್ರ. ಅದನ್ನೂ ಬಳಸಿ, ಮೀರಿ ನಡೆದು ಕಲೆಯು ತನ್ನ ಪರಂಪರೆಯ ಶ್ರೀಮಂತಿಕೆಯನ್ನು, ಸೌಂದರ್ಯಾತ್ಮಕ ಅಂಶಗಳನ್ನು, ಅರ್ಥಪೂರ್ಣವಾಗಿ ಬೆಳೆಸಿಕೊಳ್ಳಬೇಕು.


ಸಮಾಲೋಚನ ಋಣ: ಡಾ| ಬಿ. ಎ. ವಿವೇಕ ರೈ, ಡಾ| ಸಿ. ಎನ್. ರಾಮಚಂದ್ರನ್, ಡಾ| ಪುರುಷೋತ್ತಮ ಬಿಳಿಮಲೆ.