ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ ರಂಗಭೂಮಿಯ ಸಮಸ್ಯೆಗಳು

ಸಮಸ್ಯೆ ಮತ್ತು ಪ್ರಗತಿ
ಯಾವುದೇ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ, ಸಮಾಜವಾಗಲಿ, ಸಾಂಸ್ಕೃತಿಕ ಪ್ರಕಾರವಾಗಲಿ, ಸಮಸ್ಯೆಗಳನ್ನು ಹೊಂದಿರುವುದೂ, ಅವುಗಳನ್ನು ಎದುರಿಸಿ ಬಾಳಿ ಬದುಕಿ, ಬೆಳೆಯಲು ಯತ್ನಿಸುವುದೂ ಜೀವಂತಿಕೆಯ ಲಕ್ಷಣ, ಸಮಸ್ಯೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ರೀತಿ ಮತ್ತು ಅವುಗಳನ್ನು ಪರಿಹರಿಸಲು ಕಂಡುಕೊಂಡ ಮಾರ್ಗೋಪಾಯಗಳು ಹಾಗೂ ಅಂತಹ ಮಾರ್ಗೋಪಾಯಗಳ ಅಳವಡಿಕೆ ಇವು ಆ ಆ ರಂಗದ ಮುಂದಿನ ಸ್ಥಿತಿ, ಗತಿಗಳನ್ನು ನಿರ್ಧರಿಸುತ್ತವೆ. ಸಮಸ್ಯೆಗಳ ಕುರಿತ ದೃಷ್ಟಿ ಸಂಕುಚಿತ ಸಂವೇದನೆಯಾದಾಗ, ಕಂಡುಕೊಳ್ಳುವ ಪರಿಹಾರಗಳು ದುರ್ಬಲವಾಗುತ್ತವೆ, ಮಾತ್ರವಲ್ಲ, ಸಮಸ್ಯೆಗಳಿಗಿಂತಲೂ ಅಪಾಯಕಾರಿಗಳೂ ಆಗಬಹುದು. ಹಾಗೆಯೇ, ಸರಿಯಾದ ಪರಿಹಾರಗಳು ರೂಪಿತವಾದಾಗ, ಪ್ರಗತಿಯ ದಾರಿ ಸುಗಮವಾಗಬಹುದು. ಆದರೆ, ನಮ್ಮ ಯಕ್ಷಗಾನದ ಸದ್ಯದ ಪರಿಸ್ಥಿತಿಯಲ್ಲಿ, ಇಂತಹ ಭರವಸೆ ಕಾಣಿಸುತ್ತಿಲ್ಲ ಎಂದು ಖೇದದಿಂದ ಹೇಳಬೇಕಾಗಿದೆ.

ಒಳಗಿನ ಹೊರಗಿನ ಸಮಸ್ಯೆಗಳು
ಯಕ್ಷಗಾನ ರಂಗಭೂಮಿಗೆ ಒಳಗಿನ ಸಮಸ್ಯೆಗಳೂ ಇವೆ, ಹೊರಗಿನ ಸಮಸ್ಯೆಗಳೂ ಇವೆ. ಎಂದರೆ, ಸಾಮಾಜಿಕ ಆರ್ಥಿಕ ಬದಲಾವಣೆಯ ಒತ್ತಡಗಳು, ವ್ಯಾಪಾರಿ ಆವಶ್ಯಕತೆಗಳು, ಸಾಮಾನ್ಯರ ಪ್ರಶ್ನೆ ಇವೂ ಇವೆ. ಹಾಗೆಯೇ ಶೈಲಿಯಲ್ಲಿನ ಕೊರತೆಗಳು, ಕಲಾವಿದರ ಸಮಸ್ಯೆಗಳು, ಸಂಘಟನೆಯ ಸವಾಲುಗಳು, ಆರ್ಥಿಕ ಒತ್ತಡಗಳು ಇವೆ. ಶೈಲಿಯ ವಿನಾಶದ ಬಲುದೊಡ್ಡ ಸಮಸ್ಯೆ ಇದೆ. ಇವುಗಳ ನಿವಾರಣೆಗೆ ಗಂಭೀರ ಯತ್ನಗಳು ನಡೆಯದಿರುವ ಆತಂಕಕಾರಿ ಪರಿಸ್ಥಿತಿಯೂ ಇದೆ.

ಅತಿ ವಿಸ್ತಾರದ ಸಮಸ್ಯೆ
ಯಕ್ಷಗಾನ ರಂಗಭೂಮಿಯ ಸಮಸ್ಯೆಗಳ ಒಂದು ಪ್ರಧಾನ ಕಾರಣ