ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ರಂಗಭೂಮಿಯ ಸಮಸ್ಯೆಗಳು / ೨೩

ವೆಂದರೆ, ಅದರ ಅತಿಯಾದ, ವೇಗವಾದ ವಿಸ್ತಾರ. ೧೯೬೦ರ ದಶಕದಲ್ಲಿ ಆರಂಭವಾದ ಯಕ್ಷಗಾನದ ಸಂಖ್ಯಾತ್ಮಕ ವಿಸ್ತಾರವು ಈಗ ಉಚ್ಚಾಂಶವನ್ನು ತಲಪಿದ್ದು, ಜನರ ಉದಾರವಾದ ಪ್ರೋತ್ಸಾಹದಿಂದಾಗಿ, ಮುಂದುವರಿಯುತ್ತಲೇ ಇದೆ. ವಿಸ್ತರಣೆ, ಬೆಳವಣಿಗೆಗಳೇ ಸಮಸ್ಯೆಗಳನ್ನು ತರುತ್ತವೆ. ಉಚಿತ ಅನುಚಿತದ ಪರಿವೆ ಇಲ್ಲದೆ, ಪೈಪೋಟಿಯಿಂದ ಎಂಬಂತೆ ಹೆಚ್ಚುತ್ತಿರುವ ಮೇಳಗಳ, ಪ್ರದರ್ಶನಗಳ ಸಂಖ್ಯೆಯು, ಗುಣಮಟ್ಟದ ಮೇಲೆ ಸ್ವಭಾವತಃ ಪರಿಣಾಮ ಬೀರಿದೆ. ಹಿಂತಿರುಗಿ ನೋಡಿ ಆತ್ಮಾವಲೋಕನ ಮಾಡುವ ವ್ಯವಧಾನವಿಲ್ಲದೆ, ಯಕ್ಷಗಾನ ಧಾವಂತದಲ್ಲಿದೆ. ಈ ಮಧ್ಯೆ ಯಕ್ಷಗಾನದ ಶೈಲಿಯೂ, ಸೌಂದರ್ಯಾಂಶವೂ ಮರೆಯಾಗುತ್ತಿದೆ. ಪ್ರೇಕ್ಷಕರ ಪ್ರೋತ್ಸಾಹವು ಯಕ್ಷಗಾನವೆಂಬ ಹೆಸರು ಹೊತ್ತ ಎಲ್ಲದಕ್ಕೂ ದೊರೆಯುತ್ತಿದೆ. ಬೆಳೆಯುತ್ತಿರುವ ನಮ್ಮ ಅರ್ಥಮಂಡಲ, ವಿಶೇಷತಃ ಕರಾವಳಿ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಉದ್ಯಮಗಳ ವಿಕಾಸ, ಆರ್ಥಿಕ ಸಮೃದ್ಧಿ, ಬದಲಾದ ಕೃಷಿ ಸಂಬಂಧಗಳಿಂದಾಗಿ, ಹಣದ ಚಲಾವಣೆ ಹೆಚ್ಚಿದ್ದು, ಯಕ್ಷಗಾನದ ಹೆಸರಲ್ಲಿ 'ಮಾರಾಟಕ್ಕಿಟ್ಟಿದ್ದೆಲ್ಲ ಖರ್ಚಾಗುವ' ಪರಿಸ್ಥಿತಿ ಇದೆ. ಪ್ರೋತ್ಸಾಹಕ್ಕೆ ಸರಿದೂಗುವ ಉತ್ಪಾದನೆ ಅಸಾಧ್ಯವಾದುದರಿಂದ, ಅವಸರದ ಉತ್ಪನ್ನವೂ, ಕಳಪೆ ತಯಾರಿಗಳೂ ಯಾವದೇ ಮಾರುಕಟ್ಟೆಯಲ್ಲೂ ಆಗಲೇ ಬೇಕಷ್ಟೆ.

ವಾಣಿಜ್ಯ ಕರಣ

ಐವತ್ತರದ ದಶಕದಲ್ಲಿ ಆರಂಭವಾದ 'ಯಕ್ಷಗಾನದ ವ್ಯಾಪಾರೀಕರಣ (Commercialisation) ವು, ವ್ಯಾವಹಾರಿಕ ಯಶಸ್ಸು, ತಾರಾಪದ್ಧತಿ, ಹೊಸ ಆಕರ್ಷಣೆಗಳ ಹೆಸರಿನಲ್ಲಿ ಮಾಡಿದ ಬದಲಾವಣೆಗಳು ಯಕ್ಷಗಾನದ ಸಹಜ ಸೌಂದರ್ಯ್ಯಕ್ಕೆ ದೊಡ್ಡ ಆಘಾತವನ್ನು ತಂದುವು. ಯಕ್ಷಗಾನದಂತಹ ಕಲೆ, ಒಂದು ವ್ಯವಸಾಯವಾಗಿ, ವ್ಯಾಪಾರವಾಗಿ ಬೆಳೆಯುವುದು ತಪ್ಪೇನೂ ಅಲ್ಲ. ಹಿಂದಿನ ಬಯಲಾಟಗಳ ಸಂಘಟನೆಯಲ್ಲೂ ಲಾಭದ ಅವಕಾಶ ಇದ್ದೇ ಇತ್ತು. ಹೊಸ ವ್ಯವಸ್ಥೆಯು, ಅಂದರೆ ಡೇರೆ ಮೇಳಗಳ ತಿರುಗಾಟದಿಂದ, ಸಂಘಟನಾತ್ಮಕವಾದ ವ್ಯವಸ್ಥೆ ಸುಧಾರಣೆಯಾಗಿದೆ, ಕಲಾವಿದರ ಗಳಿಕೆಯಲ್ಲೂ ಸ್ವಲ್ಪ ಸುಧಾರಣೆಯಾಗಿದೆ. ಆದರೆ, ವಾಣಿಜ್ಯಕರಣದ ಹಿಂದೆ, ಶ್ರೀಮಂತವಾದ ಸಾಂಪ್ರದಾಯಿಕ ಕಲೆಯೊಂದನ್ನು ಉಳಿಸಿ ಬೆಳೆಸುವ ಸಮತೂಕದ ಧೋರಣೆಯಾಗಲಿ, ಹೊಣೆಗಾರಿಕೆಯ ಅರಿವಾಗಲಿ ಇಲ್ಲದಿರುವುದು ಮುಖ್ಯ ಸಮಸ್ಯೆಯಾಗಿದೆ. ಇಂದು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ಮೂವತ್ತು ವ್ಯವಸಾಯಿ ಮೇಳಗಳಿವೆ. ನಾಲ್ಕಾರು ಅರೆ ಹವ್ಯಾಸಿ ಮೇಳಗಳಿವೆ. ಮುನ್ನೂರರಷ್ಟು ಹವ್ಯಾಸಿ ತಂಡಗಳಿವೆ. ವಾಣಿಜ್ಯಕರಣದ ಪ್ರಭಾವ ವ್ಯಾಪಕವಾಗಿ ಹಬ್ಬಿದ್ದು, ವ್ಯಾವಹಾರಿಕತೆ ಮತ್ತು ಕಲೆಗಳ ಹೊಂದಾಣಿಕೆಯ ಗಂಭೀರವಾದ ಪ್ರಶ್ನೆ, ಪರಿಗಣನೆಯಲ್ಲೇ ಇಲ್ಲವಾಗಿದೆ.