ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೌರಾಣಿಕವೊ, ಕಲೋಚಿತವೊ?

ಯಕ್ಷಗಾನ ರಂಗಕ್ಕೆ ಸಂಬಂಧಿಸಿದ ಲಿಖಿತ, ಮೌಖಿಕ ವಿಮರ್ಶೆಗಳಲ್ಲಿ ಸಾಮಾನ್ಯವಾಗಿ ಕಾಣುವ ಒಂದು ಮಾತು- “ಯಕ್ಷಗಾನ ರಂಗಕ್ಕೆ ಪೌರಾಣಿಕ ಕಥೆ ಗಳೇ ಸೂಕ್ತ” ಎಂಬುದು. “ನಾವು ಪೌರಾಣಿಕ ಕಥೆಯನ್ನೆ ಆಡುತ್ತೇವೆ. ಇಂದಿನ ಆಟ ನೀವು ನೋಡಬಹುದು”, “ಇವತ್ತಿನ ಪ್ರಸಂಗ ಕಾಲ್ಪನಿಕ ಕಥೆ. ನೀವು ನೋಡು ವುದಿಲ್ಲ ಅಲ್ಲವೆ?” ಎಂದು ಕಲಾವಿದರು, ಕಲಾವ್ಯವಸ್ಥಾಪಕರು ವಿಮರ್ಶಕನಲ್ಲಿ ಹೇಳುವುದುಂಟು. ಯಕ್ಷಗಾನ ಸಂಪ್ರದಾಯದ ಬಗ್ಗೆ ಆಸ್ಥೆಯುಳ್ಳ ವಿಮರ್ಶಕನು ಪೌರಾಣಿಕ ಪ್ರಸಂಗವನ್ನೇ ಬಯಸುತ್ತಾನೆ ಎಂಬ ಗ್ರಹಿಕೆ ಇಲ್ಲಿ ಇರುತ್ತದೆ. ಇಲ್ಲಿ ಒಂದಿಷ್ಟು ಗೊಂದಲವಿದೆ.

ಯಕ್ಷಗಾನ ಕಲೆಯ ರೂಪ ಮತ್ತು ವಸ್ತುಗಳಿಗೆ ಇರುವ ಸಂಬಂಧಗಳ ಕುರಿತು, ಈ ಮಾತುಗಳು ವಿಸ್ತ್ರತವಾದ ಚರ್ಚೆಯನ್ನು ಪ್ರೇರಿಸುತ್ತವೆ. ಯಕ್ಷಗಾನ ಪ್ರದರ್ಶನಕ್ಕೆ ಆಧಾರವಾದ ಪ್ರಸಂಗವು ಪೌರಾಣಿಕವೇ ಆಗಿರಬೇಕೆ? ಎಂಬುದು ಒಂದು ಪ್ರಶ್ನೆ, ಪೌರಾಣಿಕ ಕಥೆಯನ್ನು ಪ್ರದರ್ಶಿಸಿದ ಮಾತ್ರಕ್ಕೆ ಯಕ್ಷಗಾನ ಪರಂಪರೆಯನ್ನು ಉಳಿಸಿದಂತಾಗುತ್ತದೆಯೆ? ಎಂಬುದು ಅದಕ್ಕಿಂತ ಮಹತ್ವದ ಪ್ರಶ್ನೆ, ಇನ್ನೂ ಮುಂದಕ್ಕೆ ಹೋಗಿ, ಪೌರಾಣಿಕವೆಂದರೇನು ಎಂಬ ವಿಚಾರವೂ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ.

ಯಕ್ಷಗಾನದ ಕಥೆ, ಕಥಾವಸ್ತು ಪೌರಾಣಿಕವೆ? ಅಪೌರಾಣಿಕವೆ? ಎಂಬುದು ಮುಖ್ಯ ಪ್ರಶ್ನೆಯಲ್ಲ. ಅದಕ್ಕೂ ಮಹತ್ವವಿದೆ. ಆದರೆ ಅದು ಅನುಷಂಗಿಕ, ಆ ಕಥೆ, ಅದರ ಮಂಡನಾ ವಿಧಾನ ಮತ್ತು ರಂಗ ಪ್ರಯೋಗ ಸ್ವರೂಪಗಳು ಆ ಕಲೆಯ ಸ್ವರೂಪಕ್ಕೆ ಹೊಂದಿಕೆಯಾಗಿ ಇವೆಯೆ? ಎಂಬುದೇ ಮುಖ್ಯ ವಿಚಾರ.

ಹಾಗೆ ನೋಡಿದರೆ, ನಮ್ಮ ಸಾಂಪ್ರದಾಯಿಕ ಕಲೆಗಳಲ್ಲಿ ಬಹಳಷ್ಟು ಬಳಕೆ ಯಲ್ಲಿರುವ ಕಥೆಗಳೆಂದರೆ ಮಹಾಭಾರತ, ರಾಮಾಯಣಗಳು. ಇವು ಪುರಾಣಗಳಲ್ಲ. 'ಅಷ್ಟಾದಶ ಪುರಾಣ'ಗಳಲ್ಲೂ ಇವುಗಳ ಗಣನೆಯಿಲ್ಲ. ರಾಮಾಯಣ, ಮಹಾ