ಆಧುನಿಕತೆಯ ಸ್ವೀಕರಣ
ಯಾವುದೇ ಒಂದು ಕಲಾಕೃತಿಯಾಗಲಿ, ಕಲಾಮಾಧ್ಯಮವಾಗಲಿ ಆಧುನಿಕತೆಯನ್ನು ಸ್ವೀಕರಿಸಿ ಬೆಳೆಯಬೇಕು. ಕಾಲದ ವಸ್ತು, ಸೌಕರ್ಯ, ಆಶಯಗಳನ್ನು ಒಳಗೊಂಡು, ಕಾಲಕ್ಕೆ ಸ್ಪಂದಿಸುತ್ತ ಬೆಳೆಯಬೇಕು. ತನ್ನ ಸುತ್ತಲಿನ ಬದುಕನ್ನು, ವಿದ್ಯಮಾನಗಳನ್ನು ಸ್ಪಂದನಶೀಲನಾದ ಕಲಾವಿದ, ಸ್ಪಂದನಶೀಲವಾದ ರಂಗ
ಭೂಮಿ ಸ್ವೀಕರಿಸುತ್ತದೆ. ಹಾಗೆ ಸ್ವೀಕರಿಸುವಾಗ, ಅದು ತನ್ನತನವನ್ನು ಬಿಡದೆ, ತೆಗೆದುಕೊಂಡರೆ, ಮತ್ತು ಅದನ್ನು ತನ್ನ ಒಂದು ಸಹಜ ಅಂಗವಾಗಿ ಮಾರ್ಪಡಿಸಿಕೊಂಡರೆ ಮಾತ್ರ ಅದು ನಿಜವಾದ ಬೆಳವಣಿಗೆಯಾಗುತ್ತದೆ. ಹಾಗಿಲ್ಲದೆ, ಒಂದು ವಸ್ತು ಅಥವಾ ಪರಿಕರ ಸುಲಭವಾಗಿ ದೊರೆಯುತ್ತದೆ ಎಂಬುದರಿಂದ, ಅದನ್ನು ಅಳವಡಿಸಿದರೆ, ಅಂತಹ ಅಳವಡಿಕೆ, ತಾನಾಗಿ ಒಂದು ಬೆಳವಣಿಗೆ ಎಂದು ಹೇಳುವಂತಿಲ್ಲ.
ಒಂದು ಉದಾಹರಣೆಯಿಂದ ಈ ವಿಷಯವನ್ನು ಸ್ಪಷ್ಟಪಡಿಸಬಹುದು. ಯಕ್ಷಗಾನ ಪ್ರದರ್ಶನಕ್ಕೆ, ಹಿಂದಿನ ಕಾಲದಲ್ಲಿ ದೀವಟಿಗೆಯ ಬೆಳಕು ಇದ್ದಿತು. ಕಾಲಾಂತರದಲ್ಲಿ, ಅದು ಬದಲಾಗಿ ಈ ವಿದ್ಯುದ್ದೀಪಗಳ ವ್ಯವಸ್ಥೆ ಬಂದಿದೆ. ಈಗ ನಾವು ಪ್ರಾಯೋಗಿಕವಾಗಿ ದೀವಟಿಗೆಗಳ ಬೆಳಕಿನಲ್ಲಿ ಆಟಗಳನ್ನು ಆಡಬಹುದಾದರೂ, ನಾವು ಆ ವ್ಯವಸ್ಥೆಯ ಕಾಲಕ್ಕೆ ಹಿಂದಿರುಗುವುದು ಸಂಭವವಲ್ಲ. ಅದು ಅಪೇಕ್ಷಣೀಯವೂ ಅಲ್ಲ. ಆದರೆ, ನಾವು ಆಧುನಿಕ ದೀಪ ವ್ಯವಸ್ಥೆಯನ್ನು ಸ್ವೀಕರಿಸುವಾಗ, ಅದು ನಮ್ಮ ಪ್ರಕಾರಕ್ಕೆ, ರಂಗಭೂಮಿಯ ಆವಶ್ಯಕತೆಗಳಿಗೆ ಅನುಗುಣವಾಗಿ ಇರಬೇಕು ಎಂಬ ವಿವೇಕವನ್ನು ಜಾಗೃತವಾಗಿ ಇರಿಸಿಕೊಂಡೇ ಸ್ವೀಕರಿಸಬೇಕಾಗಿದೆ.
ಸದ್ಯ ವ್ಯಾಪಕವಾಗಿ ಬಳಕೆಯಿರುವ ಬಿಳಿ ಬೆಳಕಿನ ಟ್ಯೂಬ್ ಲೈಟುಗಳು, ರಂಗಭೂಮಿಗೆ ಏನೇನೂ ಹೊಂದಿಕೆಯಲ್ಲದವುಗಳು. ಟ್ಯೂಬ್ ಬೆಳಕು, ಪ್ರಮಾಣದಲ್ಲೂ ಹೆಚ್ಚಾಗುತ್ತದೆ. ಮಾತ್ರವಲ್ಲ, ಆಭರಣ, ಮುಖವರ್ಣಿಕೆಗಳ ಸೊಬಗನ್ನು ಮರೆಮಾಡಿ, ಬರಿಯ ಬಿಳಿ ಸಾರಣೆಯಂತೆ ಕಾಣುತ್ತದೆ. ವೇಷದ ಆಯಾಮಗಳಿಗೆ