ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬ | ಪ್ರಸ್ತುತ

ಮೇಳಗಳೆಲ್ಲ ಬದುಕಿ ಬಾಳುವುದು ತಾರ್ಕಿಕವಾಗಿ ಅಸಂಭವ. ಹೀಗೆ ಬೇಡಿಕೆಗಿಂತ ಪೂರೈಕೆ ಹೆಚ್ಚಿಗೆ ಇರುವ ಸ್ಥಿತಿಯಲ್ಲಿ (supply exceeding demand) ಒತ್ತಾ ಯದ ಬೇಡಿಕೆ ನಿರ್ಮಾಣ ನಡೆದಿದ್ದು ಇದ್ದು ದೀರ್ಘಕಾಲಿಕ ದೃಷ್ಟಿಯಿಂದ ಕಲೆಗೂ ಉದ್ಯಮಕ್ಕೂ ಅಪಾಯಕಾರಿಯಾಗಿದೆ.

ಅಭಿರುಚಿ ನಿರ್ಮಾಣವು ಕಲಾವಿದನ ಹೊಣೆ. 'ಅಭಿರುಚಿಗೆ ತಕ್ಕಂತೆ ನಾನು ಕೊಡುತ್ತೇನೆ' ಎನ್ನುವುದು ಹೊಣೆಗಾರಿಕೆ ಇಲ್ಲದೆ, ಸುಲಭ ತರ್ಕದ ಮತ್ತು ಕಲೆಯ ಸಂದರ್ಭದಲ್ಲಿ ನ್ಯಾಯವಲ್ಲದ ಧೋರಣೆಯಾಗುತ್ತದೆ.

ಸದ್ಯ ತೆಂಕುತಿಟ್ಟು, ಸಾಂಪ್ರದಾಯಿಕ ಮತ್ತು 'ನಾಟಕ ಪದ್ದತಿ' ಎಂದು ಎರಡಾಗಿ ಒಡೆದಿದ್ದು, ವ್ಯವಸ್ಥಿತ ಯತ್ನಗಳೇನಾದರೂ ನಡೆಯದಿದ್ದರೆ, 'ಜನಪ್ರಿಯ ನಾಟಕ' ಶೈಲಿಗೂ, ತೆಂಕುತಿಟ್ಟಿನ ಆಟಗಳಿಗೂ ವ್ಯತ್ಯಾಸವಿಲ್ಲದಿರುವ ಒಂದು ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ. ಬಡಗು (ಕುಂದಾಪುರಿ) ತಿಟ್ಟು ತನ್ನ ವೈಶಿಷ್ಟ್ಯ ವನ್ನು ಕಳೆದುಕೊಳ್ಳುತ್ತ, ಉ. ಕ. ತಿಟ್ಟಿನಿಂದ ತಾನು ಯಾವುದನ್ನು ಎಷ್ಟು ಸ್ವೀಕ ರಿಸಬೇಕು, ಸ್ವೀಕರಿಸಬಾರದು ಎಂಬ ಹೊಯ್ದಾಟದಲ್ಲಿರುವುದು, ಉತ್ತರ ಕನ್ನಡ ತಿಟ್ಟು, ತನ್ನ ವಿಶಿಷ್ಟ ಪರಂಪರೆಗೆ ಒದಗಿದ ಅಪಾರ ಜನಪ್ರಿಯತೆಯ ಹಿಂದೆ ಇರುವ ಪರಂಪರೆಯ ಗಟ್ಟಿತನದ ಹಿನ್ನೆಲೆಯನ್ನು ಮನಗಾಣದೆ ಮುಂದುವರಿಯುತ್ತಿರುವುದ ರಿಂದ, ಆ ತಿಟ್ಟಿನ ಸರಳೀಕೃತ ಮತ್ತು ಸುಲಭ ರೋಮಾಂಚಕ, ಮಾದರಿಗಳನ್ನೇ ತನ್ನ ವೈಶಿಷ್ಟ್ಯವಾಗಿ ತಿಳಿದು ಪ್ರದರ್ಶಿಸುತ್ತಿರುವಂತೆ ಕಾಣುತ್ತದೆ. ಇಂತಹ ಪರಿ ಸ್ಥಿತಿಯಲ್ಲಿ ಕಲಾದೃಷ್ಟಿಯುಳ್ಳ, ಸೈದ್ಧಾಂತಿಕವಾದ ಖಚಿತತೆಯುಳ್ಳ ಧೋರಣೆಗ ಳನ್ನು ಕಲಾವಿದರೂ, ತಂಡಗಳೂ ರೂಪಿಸಿಕೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ದಿ ಪಿ. ವಿ. ಹಾಸ್ಯಗಾರರ ಸಿದ್ಧಿಯು ಕಲಾರಂಗಕ್ಕೆ ಮಾರ್ಗದರ್ಶಕ ಪ್ರೇರಣೆಯಾಗ ಲೆಂದು ಹಾರೈಸೋಣ.


ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯು, ದಿ| ಪಿ. ವಿ. ಹಾಸ್ಯಗಾರರ ಸ್ಮೃತಿ ಗೌರವವಾಗಿ, ಹೊನ್ನಾವರದ ಎಸ್. ಡಿ. ಎಂ. ಕಾಲೇಜಿನಲ್ಲಿ ಜರಗಿಸಿದ ಗೋಷ್ಠಿಯ ಅಧ್ಯಕ್ಷ ಭಾಷಣದ ಲೇಖನ ರೂಪ. (ದಿನಾಂಕ ೩೧-೭-೧೯೯೨)