ಪುಟ:ಬನಶಂಕರಿ.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬನಶಂಕರಿ ೧೧

     ಸಹಾನುಭೂತಿಯ ಆ ನಿಟ್ಟಿಸಿರು ಬೀಸಿ ಅಮ್ಮಿಯ ಅಳಲಿನ ಕೊಡ ಮತ್ತೆ ತುಳುಕಿತು,
    "ಹೊತ್ತು ಕಂತಿ ಒಂದು ಗಳಿಗೆ ಮೇಲಾಯ್ತು ಹೂಂ ಬರ್ತೀನಮ್ಮ" ಎಂದರು ಸರಸ್ವತಮ್ಮ.
    ಸಹಾನುಭೂತಿ ತೊರಿಸಿದ ಅವರು, "ದೈವದ ಆಟ" ಎನ್ನುತ್ತಾ ಮುಖ ಬಾಡಿಸಿ ಕೊಂಡು
ತಮ್ಮ ಮನೆಯ ಹಾದಿ ಹಿಡಿದರು.
    ಹಾಗೆ ಬಂದು "ಅಯ್ಯೋ ಪಾಪ" ಎಂದು ಮರುಗಿ ಹೋದವರ ಸಂಖ್ಯೆ ಹೇರಳ ಅಂಗಳ
ದಾಚೆ ನಿಂತು ಕಣ್ಣೀರು ಮಿಡಿದ ಹೊಲೆಯರಿಂದ ಹಿಡಿದು ಮನೆಯೊಳಕ್ಕೆ ಬಂದು ಸಮಾದಾನದ
ಮಾತನ್ನಾಡಿದ ಬ್ರಾಹ್ಮಣರವರೆಗೆ, ಎಷ್ಟೋ ಜನ ಬಂದು ಹೋದರು, ಕತ್ತಲೆಯ ಆ ದೀಪಾವಳಿ
ಕಳೆದು ತಿಂಗಳು ಎರಡಾಗಿದ್ದರೂ ಕಣ್ಣೀರಿನ ಅಣೆಕಟ್ಟು ಆ ಮನೆಯಲಿನ್ನೂ ಕೋಡಿಕಟ್ಟಿ ಹರಿ
ಯುತ್ತಿತ್ತು.
    ಆ ದಿನ ಅಂಚೆಯವನು ಸಾವಿನ ಸುದ್ದಿ ತಂದಾಗ, ತನ್ನ ಪಾಲಿಗೆ ಅದೆಷ್ಟು ಕ್ರೂರವಾದ
ಅಶುಭ ವಾರ್ತೆ ಎಂಬುದರ ಕಲ್ಪನೆ ಅಮ್ಮಿಗಿರಲಿಲ್ಲ ತಾನು ಹುಟ್ಟಿದುದಕ್ಕೆ ಒಂದು ತಿಂಗಳ 
ಹಿಂದೆ ತಂದೆಯ ಸಾವು, ಹುಟ್ಟಿದ ಒಂದು ವಾರದಲ್ಲೇ ತಾಯಿಯ ಸಾವು,ಆ ಬಳಿಕ ಅಜ್ಜಿಯ
ಕೈಯಲ್ಲಿ ಲಾಲನೆ ಪೋಷಣೆ-ಅದೀಗ ಅಮ್ಮಿ ಬೆಳೆದು ಬಂದ ರೀತಿ. ಆ ಎರಡು ಸಾವುಗಳೂ
ಅವಳ ಪಾಲಿಗೆ ಯಾವೂದೋ ಕತೆಯಲ್ಲಿ ನಡೆದ ಘಟನೆಗಳು ಮಾತ್ರ. ಈಗ ಕೈ ಹಿಡಿದ ಪತಿ
ದೇವರ ಸಾವು...
    ಮರುದಿನ ದೇಶವೆಲ್ಲಾ ಹಬ್ಬದ ಗದ್ದಲದಲ್ಲಿ ಮುಳುಗಿದ್ದಾಗ ರಾಯರ ಹಳ್ಳಿಗೆ ರಾಮಚಂದ್ರ
ನ ಶವವನ್ನು ಹೊತ್ತುತಂದರು.ಮನೆಯಂಗಳದಲ್ಲಿ ಆ ದೇಹಕ್ಕೆ ಸ್ನಾನವಾಯಿತು,ಯಾರೋ
ಬಂದು ಅಮ್ಮಿಯ ಕೊರಳ ಕರಿಮಣಿ ಬಿಚ್ಚಿದರು; ಕತ್ತು ಬರಿದಾಯಿತು. ಹೆರಳು ಬಿಚ್ಚಿದರು;
ಕೂದಲು ಆದಾರವಿಲ್ಲದೇ ಕೆಳಕ್ಕಿಳಿಯಿತು. ಅಮ್ಮಿಯ ಅತ್ತೆ ರೋದಿಸುತ್ತಿದ್ದರು.ಗಂಟಲು ಬಿರಿ
ಯುವ ಹಾಗೆ, ಅಮ್ಮಿ ಮಾತ್ರ ತುಟಿಪಿಟಕ್ಕೆನ್ನದೇ ಬೊಂಬೆಯಂತೆ ಕುಳಿತಳು.
   ಮಗನನ್ನು ಕಳೆದುಕೊಂಡ ಆ ತಂದೆ ತಾಯಿ...ಉಸಿರಾಡದೆ ಮಲಗಿದ್ದ ಅಣ್ಣನನ್ನು ಎವೆ
ಯಿಕ್ಕದೇ ನೋಡುತ್ತಿದ್ದ ಆ ತಂಮ್ಮಂದಿರು...
   ಬ್ರಾಹ್ಮಣರು ಶವವನ್ನು ಹೊತ್ತರು. ರಾಮಚಂದ್ರನ ಕೊನೆಯ ಪ್ರಯಾಣ...
   ಆಗ ಅಮ್ಮಿ ಕರುಳು ಕಿತ್ತು ಬರುವ ಹಾಗೆ ಕೂಗಾಡಿದಳು , ಎರಡೂ ಕೈಗಳನ್ನು ಮುಂದೆ ಚಾಚಿ
"ಅಯ್ಯಯ್ಯೋ" ಎಂದು ಗೋಳಾಡಿದಳು.
  ಹಳ್ಳಿಯ ಹೊರ ವಲಯದಲ್ಲಿ ಚಿತೆಯಾಯಿತು, ಸಂಜೆಯಾಯಿತು ಮಾವ ಸುಡುಗಾಡಿನಿಂದ
ಮನೆಗೆ ಬಂದರು.
  ದೀಪಾವಳಿ ಹಬ್ಬವೇನೋ ಆ ಹಳ್ಳಿಯಲಿ ಜರುಗಿತು ಆದರೆ ಹಿಂದಿನ ದಿನದ ಉತ್ಸಾಹ  ಮಾತ್ರ
ಉಳಿದಿರಲಿಲ್ಲ.
  ಮಗನ ಮರಣದ ಕೊರಗಿನಲ್ಲಿ ತಾಯಿ ಹಾಸಿಗೆ ಹಿಡಿದುದಾಯಿತು. ಅತ್ತೆ ಕಾಹಿಲೆ ಬಿದ್ದುದ
ರಿಂದ ಅಮ್ಮಿ ಚೇತರಿಸಿ ಕೊಂಡಳು. ರೋಗಿಯ ಆರೈಕೆಗೆಂದು ಹಗಳಿರುಳೂ ಎಚ್ಚರ ವಿದ್ದು 
ಹುಡುಗಿ ಜೀವ ತೇದಳು.