ಶೋಧಿಸುವ, ಸಂಪಾದಿಸುವ ಪ್ರಯತ್ನ ನಡೆದು, ನೂರಾರು ಸಂಪಾದನ ಕೃತಿಗಳು ಹುಟ್ಟಿ ಬಂದು, ವಚನಸಾಹಿತ್ಯ ವೀರಶೈವ ಮಠಗಳಲ್ಲಿ ತಕ್ಕ ಮಟ್ಟಿಗೆ ರಕ್ಷಿಸಲ್ಪಟ್ಟಿತು. ದುರ್ದೈವದ ಸಂಗತಿಯೆಂದರೆ ಮಠಗಳಲ್ಲಿ ಪ್ರವೇಶ ಪಡೆದ ಸಂಸ್ಕೃತ ಭಾಷೆಯಿಂದಾಗಿ ಕನ್ನಡ ಭಾಷೆಯ ಈ ವಚನಗಳು ಅಲ್ಲಿ ಮೂಲೆ ಸೇರಿದವು.
ಹೀಗೆ ಮೂಲೆಗುಂಪಾಗಿದ್ದ ವಚನಸಾಹಿತ್ಯವು ೨೦ನೆಯ ಶತಮಾನದಲ್ಲಿ ಅನೇಕ ಜನ ವಿದ್ವಾಂಸರ, ಹತ್ತಾರು ಸಂಸ್ಥೆಗಳ ಪ್ರಯತ್ನದ ಫಲವಾಗಿ ಪ್ರಕಟಣೆಗೊಳ್ಳುತ್ತ ಬಂದಿತು. ಈಗ ೧೨ನೆಯ ಶತಮಾನದ ಶರಣಸಾಹಿತ್ಯ ಪ್ರಕಟನೆಗೆ ಒತ್ತುಬಿದ್ದರೂ ಅದು ಬಿಡಿಬಿಡಿಯಾಗಿ ಪ್ರಕಟಣೆಗೊಂಡಿತು. ಆ ತರುವಾಯದ ಶರಣ ಸಾಹಿತ್ಯವಂತೂ ಉಪೇಕ್ಷೆಗೆ ಗುರಿಯಾಯಿತು. ಈ ಎರಡೂ ಕೊರತೆಗಳನ್ನು ನೀಗಿಸುವ ಉದ್ದೇಶದಿಂದ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಪುಟ ಶ್ರೇಣಿಯಲ್ಲಿ ಪ್ರಕಟಿಸಲು ಕರ್ನಾಟಕ ಸರಕಾರ “ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯನ್ನು ಕೈಗೆತ್ತಿಕೊಂಡಿತು.
ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ವ್ಯಾಪಕ ಕಾರ್ಯ ನಡೆದು, ೨೦ ಸಾವಿರ ವಚನ, ೧೦ ಸಾವಿರ ಪುಟಗಳನ್ನೊಳಗೊಂಡ ೧೫ ಸಂಪುಟಗಳು ೧೯೯೩ರಲ್ಲಿ ಬೆಳಕು ಕಂಡವು. ಆಶ್ಚರ್ಯದ ಸಂಗತಿಯೆಂದರೆ ಇದರ ೫ ಸಾವಿರ ಪ್ರತಿಗಳು ಒಂದೇ ವರ್ಷದಲ್ಲಿ ಮಾರಾಟವಾಗಿ, ಜನರಿಂದ ಬೇಡಿಕೆ ಹೆಚ್ಚುತ್ತ ನಡೆಯಿತು. ಇದನ್ನು ಪೂರೈಸುವ ದಿಕ್ಕಿನಲ್ಲಿ ಪರಿಷ್ಕೃತ ದ್ವಿತೀಯ ಆವೃತ್ತಿ ಈಗ ಹೊರಬರುತ್ತಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ ಕನ್ನಡದ ಈ ಅಪೂರ್ವ ಆಸ್ತಿಯನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.