________________
ಬಾಳ ನಿಯಮ ಕೀಲಿನಂತೆ, ಹಸಿವಿನ ಬಾಧೆ ಸದಾ ಸಿದ್ದವಾಗಿ ಅವನನ್ನು ನಿಜಸ್ಥಿತಿಗೆ ಎಳೆಯುತಿತ್ತು. ಕನಸಿನ ಲೋಕದಿಂದ ಥಟಕ್ಕನೆ ಕೆಳಗೆ ಬೀಳುವ ಮತ್ತೊಂದು ಸನ್ನಿವೇಶ ವೊದಗಿತು. ಎದುರಿನ ದೃಶ್ಯ ಮೂರ್ಛ ಹೋಗಿಸುವಷ್ಟು ಪ್ರಭಾವಶಾಲಿ ಯಾಗಿತ್ತು. ಅವನು ಗಿರನೆ ತೂರಾಡಿದನು. ನೆಲಮುಟ್ಟದ ಕುಡುಕನ ಹಾಗೆ ವರ್ತಿಸಿದನು. ಇದಕ್ಕೆಲ್ಲ ಕಾರಣ, ತನ್ನೆದುರಿಗೇ ಕುದುರೆಯೊಂದು ನಿಂತಿತ್ತು! ಅಬ್ಬ, ಎಲ್ಲಿಂದ ಬಂತು ಕುದುರೆ ! ತನ್ನ ಕಣ್ಣನ್ನು ತಾನೇ ನಂಬಲು ಆಸಾಧ್ಯ ವಾಯಿತು. ನಿಜ ; ಮಧ್ಯೆ ಮಧ್ಯೆ ಪ್ರಜ್ವಲಿಸುತ್ತಿದ್ದರೂ ಕಣ್ಣು ಮಂಜಾಗಿತ್ತು. ಆದ್ದರಿಂದ ಕಣ್ಣನ್ನು ಒರಟೊರಟಾಗಿ ಉಜ್ಜಿ ಕೊಂಡು ದೃಷ್ಟಿ ಪಥವನ್ನು ಸರಿ ಪಡಿಸಿದನು. ಆಗ ಕಂಡದ್ದು ಕುದುರೆಯಲ್ಲ ; ಕಂದು ಬಣ್ಣದ ಕರಡಿ ! ಆ ಪ್ರಾಣಿಯು ಕುತೂಹಲದಿಂದ ಅವನನ್ನು ಪರೀಕ್ಷಿಸುತಿತ್ತು.
- ಆಗಲೇ ನಾಯಕನು ಬಂದೂಕವನ್ನು ಭುಜಕ್ಕೇರಿಸಲು ಪ್ರಯತ್ನ ಪಟ್ಟನು. ಆಮೇಲೆ ಏನು ತೋರಿತೋ ಅದನ್ನು ಕೆಳಕ್ಕಿಳಿಸಿ ಸೊಂಟದ ಒರೆಯಿಂದ ಬೇಟೆಯ ಚಾಕನ್ನು ಹೊರತೆಗೆದನು. ಅವನ ಮುಂದೆ ಮಾಂಸವಿದೆ ; ಅದಕ್ಕೆ ಮುಖವಾಡ ಹಾಕಿರುವ ಜೀವವೂ ಇದೆ. ಚಾಕುವನ್ನು ಹೆಬ್ಬರಳಿನಲ್ಲಿ ಹಿಡಿದನು. ಅದರ ಕೊನೆ ಚೂಪಾಗಿತ್ತು. ಕರಡಿಯ ಮೇಲೆ ಹಾರಿ ಚಾಕುವನ್ನು ಒಳಕ್ಕೆ ನುಗ್ಗಿಸಿಬಿಟ್ಟರೆ ಸಾಕು ; ಪ್ರಾಣಿಯನ್ನು ಕೊಲ್ಲಲು ಕಷ್ಟವಾಗುವುದಿಲ್ಲ. ಆದರೆ ಅವನ ಹೃದಯ ಒಂದೇ ಸಮನೆ ಬಡಿದುಕೊಳ್ಳುತಿತ್ತು. ನೆತ್ತಿಗೇರಿದಂತೆ ಹೊಡೆತದ ರಭಸ ಜೋರಾಯಿತು. ಕಬ್ಬಿಣದ ಪಟ್ಟಿಯನ್ನು ಹಣೆಗೊತ್ತಿದಂತೆ ನೋವಾಗಿ, ಅವನ ಬುದ್ಧಿ ಭ್ರಮಣೆಗೊಂಡಿತು.
ಅಪ್ಪಳಿಸುವಂತಿದ್ದ ಹೆದರಿಕೆಗೆ ಸಿಕ್ಕಿ ಅವನ ಹುಚ್ಚು ಧೈರ್ಯ ಓಡಿ ಹೋಯಿತು. ಹೀಗೆ ದುರ್ಬಲನಾಗುತ್ತ ಬಂದರೆ ಮುಂದೇನು ಗತಿ ? ಎಂದು ಕಳವಳಗೊಂಡನು. ತಕ್ಷಣ ಕರಡಿಯನ್ನೇ ದಿಟ್ಟಿಸಿನೋಡುತ್ತ, ಮುಷ್ಟಿಯಲ್ಲಿ ಭದ್ರವಾಗಿ ಚಾಕುವನ್ನು ಹಿಡಿದು, ವಿಸ್ಮಯಗೊಳಿಸುವಂಥ ಭಂಗಿಯನ್ನು ತಾಳಿದನು. ಕರಡಿ ವಕ್ರ ವಕ್ರವಾಗಿ ಎರಡು ಹೆಜ್ಜೆಗಳನ್ನು ಮುಂದೆ ಹಾಕಿ ನೆಟ್ಟಗೆ ನಿಂತಿತು. ಮನುಷ್ಯನನ್ನು ಪರೀಕ್ಷಿಸಲು : ಗುರ್, ಗುರ್ ' ಎಂದು ಶಬ್ದ ಮಾಡಿತು....ಸುಮ್ಮನೆ ಮೇಲೆ ಬೀಳುವುದಕ್ಕಿಂತ ಮನುಷ್ಯನ ಪ್ರತಿಕ್ರಿಯೆ: ಯನ್ನು ಕಾದು ನೋಡುವುದು ಒಳ್ಳೆಯದು. ಅವನೇನಾದರೂ ಓಡಿದರೆ, ಸತ್ವ ತಿಳಿದುಹೋಗುತ್ತದೆ. ಆಗ ಸುಲಭವಾಗಿ ತಾನು ಹಿಂಬಾಲಿಸಬಹುದು....