ಪುಟ:ಬಾಳ ನಿಯಮ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪ ಬಾಳ ನಿಯಮ

ವಿವಿಧ ಗುಂಪುಗಳ ಸೃಷ್ಟಿಯಲ್ಲಿ....ಇಂಥ ಆಳವಾದ ಭಾವನೆ ವೃದ್ಧ ಕಾನ್ ಕೂಶನ ಸಾಮಾನ್ಯ ಬುದ್ಧಿಗೆ ಸಿಲುಕಿದ್ದು ತುಂಬ ಸಾಧನೆಯ ಫಲವೇ ಸರಿ. ಆದ್ದರಿಂದಲೇ ತಕ್ಷಣ ಗ್ರಹಿಸಲು ಶಕ್ಯವಾಯಿತು....ನಿಯಮದ ಸೂತ್ರವನ್ನು ಎಲ್ಲೆಡೆಯಲ್ಲೂ ಕಾಣಬಹುದು. ಸಸ್ಯದ ಬೆಳವಣಿಗೆ, ಕಣ್ಣು ಕುಕ್ಕುವಂತೆ ಹಸಿರು ಬಣ್ಣ ತಾಳುವ ಮೊಗ್ಗು, ಕಡೆಗೆ ಹಳದಿಯಾಗಿ ಬೀಳುವ ಎಲೆ ಈ ಸಾಮಾನ್ಯ ಚರಿತ್ರೆಯಲ್ಲೇ ಬಾಳಿನ ನಿಯಮವಿದೆ. ಆದರೆ ಪ್ರತಿ ವ್ಯಕ್ತಿಗೂ ನಿಸರ್ಗದತ್ತವಾದ ಕರ್ತವ್ಯವೊಂದಿದೆ. ಅದನ್ನು ನೆರವೇರಿಸಲಿ, ಬಿಡಲಿ, ಮನುಷ್ಯ ಸಾಯುವುದಂತು ಖಂಡಿತ. ಒಟ್ಟಿನಲ್ಲಿ ನಿಸರ್ಗ ನಿಯಮ ಯಾರನ್ನೂ ಲಕ್ಷಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ವಿಧೇಯರಾದವರು ಬೇಕಾದಷ್ಟು ಮಂದಿಯಿದ್ದಾರೆ. ಇದರ ವ್ಯಾಪ್ತಿ ಎಲ್ಲಿಯ ತನಕ ಹೋಗಿದೆಯೆಂದರೆ ವಿಧೇಯನಾದವನ ಸ್ಥಾನ ಗೌಣವಾಗಿ, 'ವಿಧೇಯತೆ' ಎಂಬ ಶಕ್ತಿಯೇ ಜಗತ್ತಿನ ಸೂತ್ರವನ್ನು ಹಿಡಿಯ ಬಲ್ಲ ಜೀವಾಳವಾಗಿದೆ. ತಾನು ಚಿಕ್ಕವನಾಗಿದ್ದಾಗ ವೃದ್ಧರನ್ನು ಹೇಗೆ ನೋಡಿದ್ದನೋ, ಹಾಗೆಯೇ ಆ ವೃದ್ಧರೂ ಕೂಡ ತಮ್ಮ ಬಾಲ್ಯದಲ್ಲಿ ಹಿಂದಿನವರನ್ನು ಕಂಡಿರಲೇಬೇಕು. ಆದ್ದರಿಂದ ಅನೇಕರ ವಿಧೇಯತೆಯಿಂದ ಒಂದು ತಂಡ ಇಲ್ಲಿಯತನಕ ಬದುಕಿದೆ ; ಮುಂದೆಯೂ ಬದುಕುತ್ತದೆ. ಆಗಿಹೋದ ವ್ಯಕ್ತಿ ಎಲ್ಲಿ ಯಾವ ವಿಶ್ರಾಂತಿ ಸ್ಥಳವನ್ನು ಸೇರಿದ? ಎಂಬ ಪ್ರಶ್ನೆಯನ್ನು ಮಾತ್ರ ನಮ್ಮ ಜ್ಞಾಪಕ ಶಕ್ತಿಯಿಂದ ದೂರವಿಡಬೇಕು. ಅವರ ಗಣನೆ ಬೇಡ ; ಅವರ ಚರಿತ್ರೆಯನ್ನು ಇತಿಹಾಸದ ಉಪಕಥೆಯೆಂದು ಭಾವಿಸೋಣ. ಬೇಸಿಗೆಯ ದಿನಗಳಲ್ಲಿ ತಾನಾಗಿಯೆ ಹೊರಟುಹೋಗುವ ಮೋಡಗಳಂತೆ ಅವರು ಕಣ್ಮರೆಯಾದರು. ಹಾಗೆಯೆ ಪ್ರಾಸಂಗಿಕವಾಗಿ ಬಂದಿರುವ ತಾನು ಕೂಡ ಈ ಜಗತ್ತಿನಿಂದ ಜಾರಿಹೋಗಲೇ ಬೇಕು. ಅದರಿಂದ ನಿಸರ್ಗಕ್ಕೆ ಯಾವ ದುಃಖವೂ ಇಲ್ಲ. ನಿಸರ್ಗದ ಮುಖ ಎರಡು ಬಗೆಯಾಗಿದೆ. ಪೀಳಿಗೆಯ ಬೆಳವಣಿಗೆ ಒಂದಾದರೆ, ವ್ಯಕ್ತಿಗಳು ಸಾಯಲೇಬೇಕೆಂಬ ನಿಯಮ ಮತ್ತೊಂದು. ಒಂದು ಕರ್ತವ್ಯ ಪ್ರಚೋದಕವಾಗಿದ್ದರೆ, ಮತ್ತೊಂದು ಶಾಸನ ರೂಪವಾಗಿದೆ. ಉದಾಹರಣೆಗೆ, ಒಬ್ಬ ಹುಡುಗಿ ಇದ್ದಾಳೆನ್ನಿ, ಅವಳಿಗೆ ವಯಸ್ಸು ಬಂದಂತೆ ಸುಂದರಿಯೂ, ದೃಢಕಾಯಳೂ, ಮೋಹಕ ನೇತ್ರವುಳ್ಳವಳೂ ದಿಟ್ಟತನದಿಂದ ನಡೆಯುವವಳೂ ಆಗುತ್ತಾಳೆ. ಎಲ್ಲರ ಕಣ್ಣನ್ನೂ ಆನಂದಸಾಗರದಲ್ಲಿ ಮುಳುಗಿ ಸುತ್ತಾಳೆ. ಅಷ್ಟು ಮಾತ್ರಕ್ಕೆ ಅವಳ ಜೀವನದ ಕರ್ತವ್ಯ ಮುಗಿಯಿತೇ ? ಇಲ್ಲ; ತರುಣಿಯ ವಿವಿಧ ಹಾವಭಾವಗಳು ಎಷ್ಟೋ ಪುರುಷರ ಮನೋರಂಗದಲ್ಲಿ