ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಕರ ಮಂಡಳಿ ಪಿಸ್ತೂಲನ್ನು ಕೊಟ್ಟನು. ಕೂ-ಸೊ-ಟೀ ನನ್ನ ತಾಯಿಯ ಸೋದರ, ಆ ಪಿಸ್ತೂಲು ಆಶ್ಚರ್ಯಕರವಾಗಿತ್ತು, ಆರು ಬಾರಿಯೂ ಜೋರಾಗಿ ಹಾರಿಸ ಬಹುದಾಗಿತ್ತು. ಕೂ-ಸೊ-ಟೀ ದೊಡ್ಡ ಮನುಷ್ಯನಾದ. ನಮ್ಮ ಬಿಲ್ಲು ಬಾಣಗಳನ್ನು ನೋಡಿ ಹೆಂಗಸರ ಸಲಕರಣೆ ಎಂದು ಹಾಸ್ಯ ಮಾಡಿದ. ಬೋಳು ತಲೆಯ ನೇರಕ್ಕೆ ಸರಿಯಾಗಿ ಪಿಸ್ತೂಲು ಹಿಡಿದ. ಹಾಗೆ ಮಾಡಬಾರದೆಂದು ಈಗ ನಮಗೆ ಗೊತ್ತಿದೆ. ಆದರೆ ಆಗ ? ಅದರಲ್ಲೂ ಕೂ-ಸೊ-ಟೀಗೆ ಹೇಗೆ ತಿಳಿಯಬೇಕು ? ಧೈರ್ಯದಿಂದ ಬೋಳುತಲೆಗೆ ಆರುಬಾರಿ ಪಿಸ್ತೂಲಿನಿಂದ ಹೊಡೆದುಕೊಂಡನು. ಮೊಟ್ಟೆ ಒಡೆಯುವಂತೆ ಮುಖ ಚೂರಾಯಿತು. ಗೂಡಿ ನಿಂದ ಬೀಳುವ ಜೇನಿನಂತೆ ಅವನ ಮೆದುಳು ನೆಲಕ್ಕೆ ಬಿತ್ತು ! ಅವನು ಒಳ್ಳೆಯ ಬೇಟೆಗಾರನಾಗಿದ್ದನು. ಈಗ ಅವನ ಹೆಂಡತಿ ಮಕ್ಕಳಿಗೆ ಮಾಂಸ ತರಲು ಯಾರೂ ಇಲ್ಲ. ನಮಗೆ ಕೋಪ ನೆತ್ತಿಗೇರಿತು, ನಿಷ್ಟುರದಿಂದ ಹೇಳಿದೆವು : ( ಬಿಳೀ ಜನಕ್ಕೆ ಯಾವುದು ಒಳ್ಳೆಯದೋ, ಅದು ನಮಗೆ ಕೆಟ್ಟದ್ದು. ಇದು ಸತ್ಯ, ಕೊಬ್ಬಿದ ಬಿಳೀ ಮನುಷ್ಯರು ಹೆಚ್ಚು ಸಂಖ್ಯೆಯಲ್ಲಿ ಇರಬಹುದು ; ಆದರೆ ಅವರ ಮಾರ್ಗ ನಮ್ಮನ್ನು ಅಲ್ಪ ಸಂಖ್ಯಾತರನ್ನಾಗಿಯೂ, ಹೊಟ್ಟೆಗಿಲ್ಲದವರನ್ನಾಗಿಯೂ ಮಾಡುತಿತ್ತು,

    • ಮೂರನೆಯ ಬಿಳೀ ಮನುಷ್ಯ ಬಂದನು. ಆಶ್ಚರ್ಯಕರ, ಆಹಾರ ಪದಾರ್ಥಗಳ ಭಂಡಾರ ಅವನಲ್ಲಿತ್ತು. ಬಹುಮಾನಗಳಿಂದಲೂ ದೊಡ್ಡ ಮಾತಿನ ಭರವಸೆಗಳಿಂದಲೂ ಮರುಳುಗೊಳಿಸಿ, ನಮ್ಮಲ್ಲಿದ್ದ ಇಪ್ಪತ್ತು ಬಲಿಷ್ಠ ನಾಯಿಗಳನ್ನು ವ್ಯಾಪಾರಮಾಡಿದನು. ಅಷ್ಟೇ ಅಲ್ಲ ; ಪ್ರಯಾಣಕ್ಕೆಂದು ಹತ್ತು ಯುವಕ ಬೇಟೆಗಾರರನ್ನು ಕರೆದನು. ಯಾವ ಪ್ರಯಾಣವೋ ? ಎಲ್ಲಿಗೆ ಹೋದ ರೆಂದು ಯಾರಿಗೂ ತಿಳಿಯದು. ಕೇಳಿಬಂದ ಮಾತಿನಂತೆ, ಯಾವ ಮನುಷ್ಯನೂ ಹೋಗದಿದ್ದ ಹಿಮ ಪರ್ವತಗಳ ಮಂಜಿನಲ್ಲಾಗಲಿ, ಭೂಮಿಯ ತುತ್ತ ತುದಿಯ ನಿಶ್ಯಬ್ದ ಬೆಟ್ಟಗಳಲ್ಲಾಗಲಿ ಅವರು ಸತ್ತಿರಬೇಕು. ಹೇಗಾದರೂ ಆಗಲಿ ಒಟ್ಟಿನಲ್ಲಿ ನಾಯಿಗಳೂ ಯುವಕ ಬೇಟೆಗಾರರೂ ವೈಟ್ ಫಿಶ್ ಜನರ ಕಣ್ಣಿಗೆ ಮತ್ತೆ ಬೀಳಲಿಲ್ಲ.

“ ವರ್ಷಗಳು ಕಳೆದಂತೆ, ಬಿಳಿಯ ಜನ ಹೆಚ್ಚು ಹೆಚ್ಚಾಗಿ ಬರ ತೊಡಗಿದರು. ಹಣ ಮತ್ತು ಉಡುಗೊರೆಯ ಪದಾರ್ಥಗಳನ್ನಿತ್ತು ಯುವಕ ರನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು. ಕೆಲವು ವೇಳೆ ಯುವಕರು ಮರಳಿ ಬರುತಿದ್ದರು. ಪೆಲ್ಲಿ ಭೂಮಿಯಾಚೆ ಇರುವ ಅಪಾಯವನ್ನೂ ಕಷ್ಟ