ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಹೆಚ್ಚು ಕೋಟಲೆಗಳಿದ್ದರೂ, ಯಾವ ವ್ಯತ್ಯಾಸವೂ ಇಲ್ಲದೆ, ಹಾಗೆಯೇ ಇದ್ದರು: ವಿಪರೀತದ ಜಾಡ್ಯಗಳಾದ ಸಿಡುಬು ಮತ್ತು ದಡಾರ, ಕೆಮ್ಮು ಮತ್ತು ರಕ್ತ ವಾಂತಿ ; ಹಿಮಕ್ಕೆ ಹೆದರುವ ನುಣುಪಾದ ಬಿಳಿಯ ಚರ್ಮ ; ಆರು ಬಾರಿ ಜೋರಾಗಿ ಹೊಡೆದರೂ ಪ್ರಯೋಜನವಿಲ್ಲದ ಪಿಸ್ತೂಲು ಇತ್ಯಾದಿ....ಅಂತೂ ತಮ್ಮ ಸಣ್ಣತನದಿಂದಲೇ ಬಿಳಿಯ ಜನ ಕೊಬ್ಬಿ, ಪ್ರಪಂಚದ ಎಲ್ಲೆಡೆ ದರ್ಪದ ಕೈ ಬೀಸಿ, ಇತರರ ಮೇಲೇರಿ ನಡೆದರು. ಅವರ ಹೆಂಗಸರು ಕೂಡ ಚಿತ್ರ ಮಕ್ಕಳಂತೆ ಮೃದುವಾಗಿದ್ದರು ; ಬಳುಕುವಂತಹ ಆಕೃತಿ ; ಆದರೆ ಎಂದಿಗೂ ಬಾಗುತ್ತಿರಲಿಲ್ಲ! ಅಂಥವರು ಗಂಡಸರ ತಾಯಿಯಾಗಿದ್ದರು ! ಒಟ್ಟಿನಲ್ಲಿ ಈ ನಯವಾದ ಪ್ರವೃತ್ತಿ ಹಾಗೂ ಕಾಯಿಲೆ, ದೌರ್ಬಲ್ಯಗಳಿಂದಲೇ ಅವರಿಗೆ ಶಕ್ತಿ, ಅಧಿಕಾರ, ದರ್ಪಗಳು ಬಂದವು. ದೇವರೋ ದೆವ್ವವೋ ಏನಾದರಾಗಲಿ ; ನನಗೆ ಗೊತ್ತಿಲ್ಲ. ಮುದುಕ ನೆಂಬರ್‌ನಂಥ ವೈಟ್ ಫಿಶ್‌ಗೆ ಏನು ಗೊತ್ತಿದೆ ? ಇಷ್ಟು ಮಾತ್ರ ಗೊತ್ತಿತ್ತು : ಬಿಳಿಯ ಮನುಷ್ಯರು ಬುದ್ದಿವಂತರು ಮತ್ತು ಪ್ರಪಂಚದ ಎಲ್ಲೆಡೆ ಸುತ್ತಾಡುತ್ತ ಹೊಡೆದಾಡುವವರು-ಎಂದು ಈ ಹಿಂದೆ ತಿಳಿಸಿದಂತೆ, ಕಾಡಿನಲ್ಲಿ ಮಾಂಸ ಕಡಿಮೆಯಾಗುತ್ತ ಬಂತು. ಕೊಲ್ಲಲು ಯಾವ ಪ್ರಾಣಿಯೂ ಇಲ್ಲದಿರುವಾಗ, ಬಿಳಿಯರು ಕೊಟ್ಟಿದ್ದ, ದೂರ ದಿಂದಲೇ ಹೊಡೆಯಬಲ್ಲ ಬಂದೂಕಿನಿಂದ ಏನು ಪ್ರಯೋಜನ ? ನಾನು ಬಾಲಕನಾಗಿದ್ದಾಗ ಪ್ರತಿ ಬೆಟ್ಟದಲ್ಲೂ ಹಿಮಪಶುವಿತ್ತು ; ಪ್ರತಿವರ್ಷವೂ ಲೆಕ್ಕವಿಲ್ಲದಷ್ಟು ಕ್ಯಾರಿಬೋ ಪ್ರಾಣಿಗಳು ಬರುತಿದ್ದವು. ಈಗ ಹತ್ತು ದಿನ ತಿರುಗಿದರೂ ಯಾವುದರ ಹುಟ್ಟೂ ಇಲ್ಲ. “ನಾನು-ಇಂಬರ್-ಈ ವಿಷಯಗಳ ಮೇಲೆ ತರ್ಕಿಸಿದೆ. ವೈಟ್ ಫಿಶ್, ಸೆಲ್ಲಿ ಮುಂತಾದ ತಂಡಗಳು ಕಾಡು ಮಾಂಸದಂತೆ ನಾಶವಾಗುತ್ತಿದ್ದ ವು. ಮತ್ತೆ ಅನೇಕ ದಿನಗಳು ಯೋಚಿಸಿದೆ. ಬೇಟೆಗಾರರೊಡನೆ ಮತ್ತು ಬುದ್ಧಿ ವಂತರಾದ ಮುದುಕರ ಹತ್ತಿರ ಕುಳಿತು ಚರ್ಚಿಸಿದೆ. ಹಳ್ಳಿಯ ಶಬ್ದಗಳಿಂದ ದೂರವಿದ್ದು ಒಂದೇ ಧ್ಯಾನಮಾಡಿದೆ. ತುಂಬಿದ ಹೊಟ್ಟೆ ಜಡತ್ವಕ್ಕೆ ಕಾರಣ ನಾಗುತ್ತೆಂಬ ಭಯದಿಂದ ಮಾಂಸವನ್ನೇ ತಿನ್ನಲಿಲ್ಲ. ಕಣ್ಣು ತೆರೆದಿತ್ತು ; ಕಿವಿ ಚುರುಕಾಗಿತ್ತು. ತಲೆಗೆ ಹೊಳೆಯಬಹುದಾದ ಯಾವುದೋ ಕಾರ್ಯಕ್ಕೆ ಕಾದಿದ್ದೆ. ರಾತ್ರಿಯ ಕತ್ತಲಲ್ಲಿ ಒಬ್ಬಂಟಿಗನಾಗಿ ನದಿಯ ತೀರಕ್ಕೆ ಹೋಗಿ ಆಲೆದಾಡಿದೆನು, ನೀರು, ಗಾಳಿ ಅಳುತ್ತಿದ್ದಂತೆ ಶಬ್ದ ಮಾಡುತಿದ್ದವು. ಸತ್ತು ಹೋಗಿದ್ದ ವೃದ್ದ ಬೇಟೆಗಾರರ ಸಂದೇಶ ಕೇಳಿಬಂತು.