ಪುಟ:ಬಾಳ ನಿಯಮ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ತನ್ನದೇ ಆಗಿಬಿಡುತಿತ್ತು !.... ಹೀಗೆ ಯೋಚಿಸಿದನು ; ನಿಧಾನವಾಗಿ ಮೇಲಕ್ಕೆ ಬಂದು ಹಸಿನೆಲದ ಮೇಲೆ ಕುಸಿದುಬಿದ್ದನು. ಮೊದಲು ತನ್ನ ಅಂತರಾತ್ಮಕ್ಕೆ ಕೇಳಿಸುವಂತೆ ಕೂಗಿ ಕೊಂಡನು. ಅವನ ಸುತ್ತಲೂ ನಿಷ್ಕರುಣ ಶೂನ್ಯತೆ ತಾಂಡವವಾಡುತಿತ್ತು ; ಅದು ಒಳಗೊಳಗೆ ತನ್ನನ್ನು ರೇಗಿಸುತ್ತಿರುವಂತೆ ನಾಯಕನಿಗೆ ಬಾಸವಾಯಿತು. ಅದಕ್ಕೇ ಇರಬೇಕು ; ಅವನು ಕಣ್ಣೀರಿಲ್ಲದೆ ತುಂಬಾ ಹೊತ್ತು ಗಟ್ಟಿಯಾಗಿ ಅರಚಿದನು. ಉರಿಯನ್ನು ಹೊತ್ತಿಸಿ ಬಿಸಿ ನೀರು ಕುಡಿದು ಮೈ ಬೆಚ್ಚಗೆ ಮಾಡಿ ಕೊಂಡನು. ಹಿಂದಿನ ರಾತ್ರಿಯಂತೆ ಬಂಡೆಯ ಉಬ್ಬು ಸಾಲಿನ ಮೇಲೆಯೆ ಕ್ಯಾಂಪ್ ಮಾಡಿದನು. ಬೆಂಕಿಕಡ್ಡಿಗಳನ್ನು ಆರಿಸಿ ಒಣಗಿದೆಯೋ ಇಲ್ಲವೋ ಎಂದು ಪರೀಕ್ಷಿಸಿದನು. ಗಡಿಯಾರಕ್ಕೆ ಕೀಲುಕೊಡುವುದನ್ನು ಮರೆಯಲಿಲ್ಲ. ಹಾಸುಗಂಬಳಿ ಮೈ ತಣ್ಣಗೆ ಮಾಡುವಷ್ಟು ತೇವವಾಗಿತ್ತು. ಈ ಕಾಲಿನ ಹರಡು ನೋವಿನಿಂದ ಅದಿರಾಡುತಿತ್ತು. ತಾನು ಹಸಿದಿದ್ದೇನೆಂಬ ಒಂದೇ ಅಂಶ ಅವನ ತಲೆಯಲ್ಲಿ ಸುಳಿದಾಡಿತು. ನಿದ್ರೆಯಲ್ಲೂ ವಿಶ್ರಾಂತಿಯಿಲ್ಲ. ವಿವಿಧ ರೀತಿಯಲ್ಲಿ ಉತ್ಸವದ ಊಟ ಮತ್ತು ಬಡಿಸುವ ವಿಧಾನಗಳನ್ನು ಕನಸಿನಲ್ಲಿ ಕಂಡನು. ಎದ್ದಾಗ ಜ್ವರ ಪೀಡಿತನಾಗಿ ನಡುಗುತ್ತಿದ್ದನು. ಸೂರ್ಯ ಇನ್ನೂ ಬಂದಿರಲಿಲ್ಲ. ಆಕಾಶ, ಭೂಮಿಗಳ ಕರಾಳ ರೂಪ ಎದ್ದು ಕಾಣುತಿತ್ತು. ಚಳಿ ಗಾಳಿ ಬೀಸುತಿತ್ತು, ಹೊಸ ಹಿಮ ದಟ್ಟವಾಗಿ ಬೀಳುತ್ತಾ ಬೆಟ್ಟತುದಿಗಳನ್ನು ಮರೆಮಾಡುತಿತ್ತು. ತೇಲಿಬರುತ್ತಿದ್ದ ಗಾಳಿಯೂ ಭಾರವಾಯಿತು. ಘನಹಿಮದ ಹಲ್ಲೆ ಗಳು ದೊಡ್ಡವಾಗಿಯೆ ಇದ್ದವು. ಭೂಮಿಗೆ ಬಿದ್ದ ತಕ್ಷಣ ಕರಗಿ ನೀರಾಗು ತಿತ್ತು. ಹೀಗೆ ತನ್ನ ಸುತ್ತಮುತ್ತಲೂ ಸಣ್ಣ ಸಣ್ಣ ಪ್ರವಾಹಗಳು ಹರಿಯ ತೊಡಗಿದವು. ಮಳೆಯಿಲ್ಲದಿದ್ದರೂ, ಆ ಕೆಲಸ ನಡೆದಿತ್ತು. ನಾಯಕನ ಬೆಂಕಿ ಕಡೆಗೂ ತಣ್ಣಗಾಯಿತು. ಎಲ್ಲಿಯ ತನಕ ವ್ಯರ್ಥವಾಗಿ ಕಡ್ಡಿಗಳನ್ನು ಒಡ್ಡು ವುದು ? ಇನ್ನು ಗಂಟುಕಟ್ಟಿ ಬಿದ್ದು, ಎದ್ದು, ಹೊರಡುವುದಕ್ಕೆ ಇದೇ ಮುನ್ನೆಚ್ಚರಿಕೆ ಯೆಂದು ಭಾವಿಸಿದನು. ಎಲ್ಲಿಗೆ ಹೋಗುವುದು ? ಅವನಿಗೆ ತಿಳಿಯದು .... ಕಡ್ಡಿ ಪುಳ್ಳೆಗಳ ನಾಡನ್ನು ನೋಡಲೇಬೇಕೆಂಬ ಅಪೇಕ್ಷೆ ಇಲ್ಲ ಅಥವಾ ಸ್ನೇಹಿತ ಬಿಲ್ ನನ್ನು ಪತ್ತೆ ಮಾಡುವ ಉತ್ಕಟ ಅಭಿಮಾನವೂ ಇಲ್ಲ ;ಎಲ್ಲಕ್ಕಿಂತಲೂ ಹೆಚ್ಚಾಗಿ ಗುಪ್ತಸ್ಥಳದ ಕಡೆಯೂ ಗಮನವಿಲ್ಲ. ಡೀಸ್ ನದಿ ಇದ್ದರೇನು ಹೋದರೇನು ?