ಪುಟ:ಬೆಳಗಿದ ದೀಪಗಳು.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾರಾಣಾ ಪ್ರತಾಪಸಿಂಹ

೯೩

ಸ್ವದೇಶವನ್ನು ನೀವು ತುರ್ಕರ ಪಾಲು ಮಾಡುವಿರೆಂಬ ಸಂಗತಿಯು ನನ್ನನ್ನು ಅನೇಕಪರಿಯಿಂದ ಕ್ಲೇಶಪಡಿಸುತ್ತಲಿದೆ. ಆದರೆ ನಮ್ಮ ದೇಶವನ್ನು ತುರ್ಕರ ಸ್ವಾಧೀನ ಮಾಡಗೊಡಲಿಕ್ಕಿಲ್ಲೆಂದು ಯಾರಾದರೂ ನನಗೆ ಆಶ್ವಾಸನವನ್ನು ಕೊಟ್ಟರೆ ನಾನು ಸುಖಸಮಾಧಾನಗಳಿಂದ ನನ್ನ ಪ್ರಾಣವನ್ನು ಬಿಡುವೆನು." ಈ ಮಾತು ಕೇಳಿ ದುಃಖೋದ್ವೇಗದಿಂದ ಎಲ್ಲರ ಕುತ್ತಿಗೆಯ ಶಿಲೆಗಳು ಉಬ್ಬಿದವು. ಅವರು ಶಪಥ ಪೂರ್ವಕವಾಗಿ "ನಾವು ನಮ್ಮ ದೇಶದ ಸ್ವಾತಂತ್ರ್ಯವನ್ನು ಮರಳಿ ಸಂಪಾದಿಸುವವರೆಗೆ ಇಲ್ಲಿ ರಾಜಮಂದಿರಗಳನ್ನು ಕಟ್ಟಿ ವಿಲಾಸದಲ್ಲಿ ಕಾಲವನ್ನು ಕಳೆಯಲಿಕ್ಕಿಲ್ಲ. ಯುವರಾಜ ಅಮರಸಿಂಹರಾದರೂ ಇದೇ ವ್ರತವನ್ನು ಪಾಲಿಸುವರು. ಈ ವಿಷಯವಾಗಿ ತಾವು ಯತ್ಕಿಂಚಿತವಾದರೂ ಚಿಂತಿಸಕೂಡದು" ಎಂದು ಆಶ್ವಾಸನವನ್ನು ಕೊಟ್ಟರು. ಈ ಶಬ್ದಶ್ರವಣ ಮಾತ್ರದಿಂದಲೇ ಪ್ರತಾಪನಿಗೆ ಸಮಾಧಾನವಾಗಿ ಅವನು ಸುಖದಿಂದ ಪ್ರಾಣವನ್ನು ಬಿಟ್ಟನು.