ಪುಟ:ಬೆಳಗಿದ ದೀಪಗಳು.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೪

ಸಂಪೂರ್ಣ-ಕಥೆಗಳು

ಭಕ್ತಿಯಿಂದಲೂ, ಆನಂದದಿಂದಲೂ, ಉತ್ಸವದಿಂದಲೂ ಆ ನವೀನನಾದ ನರಾಧಿರನನ್ನು ಸತ್ಕರಿಸಿ ಸಾರ್ವಭೌಮನಿಗುಚಿತವಾದ ಸ್ವಾಗತವನ್ನೂ ಮಾನ ಮರ್ಯಾದೆಗಳನ್ನೂ ಕೊಟ್ಟರು. ಆ ಪುರವಾಸಿಗಳ ಸತ್ಕಾರದಿಂದ ಪರಮ ಸಂತುಷ್ಟನಾದ ಸಿಕಂದರ ಬಾದಶಹನು ಸಾಧುಸಂತರನ್ನೂ, ಪಂಡಿತಶಾಸ್ತ್ರಿಗಳನ್ನೂ, ವೃತ್ತಿ-ಸ್ವಾಸಿಗಳುಳ್ಳ ಮಹಾಜನರನ್ನೂ ಆದರದಂದ ಬೀಳ್ಕೊಂಡು ಅವರೆಲ್ಲರಿಗೆ ಧನಕನಕ ವಸ್ತ್ರಾಭರಣ ಬಿರುದಾವಳಿ ಮುಂತಾದವುಗಳನ್ನಿತ್ತು ಸಂಭವಿಸಿದನು. ಪೂರ್ವದ ಮಹಾ ಸಾರ್ವಭೌಮರ ರಾಜಧಾನಿಯಾಗಿದ್ದ ಆ ಬಾಬಿಲೋನ ನಗರವೇ ಅಂದಿನಿಂದ ತನ್ನ ರಾಜಧಾನಿಯಾಯಿತೆಂದು ಬಾದಶಹನು ಹೇಳಿದ ಕೂಡಲೆ, ಅಲ್ಲಿಯವರಿಗೆ ಪರಮಾವಧಿಯ ಸಂತೋಷವಾಯಿತು. ಗುಣಲೇಶವಾದರೂ ಇಲ್ಲದೆ ಕೇವಲ ಆಕಸ್ಮಿಕವಾದ ಜನ್ಮ ಮಾತ್ರದಿಂದಲೇ ರಾಜನಾಗಿರುವ ಕ್ಷುದ್ರನಾದ ಪ್ರಾಣಿಯು ಪರಪೀಡಾಕಾರಕನಾಗಿರುವನಲ್ಲದೆ, ಅವನಿಂದ ಲೋಕಕಲ್ಯಾಣದ ಕಲಸಗಳಾಗುವದಿಲ್ಲ. ದರಾಯಸನು ತಾನು ಸಾರ್ವಭೌಮ ಪದಕ್ಕೆ ಬಂದ ನಂತರ ಬಾಬಿಲೋನಿಯದ ಜನರ ಧರ್ಮವನ್ನು ಕೆಡಿಸಲಿಕ್ಕೆ ಪ್ರಯತ್ನ ಮಾಡಿದ್ದಲ್ಲದೆ, ಆರಾಧ್ಯ ದೇವತೆಯಾದ ಬೇಲಾನೆಂಬ ದೇವರ ಸಂಸ್ಥಾನಕ್ಕೆ ನಡೆದಿರುವ ವೃತ್ತಿಗಳನ್ನೆಲ್ಲ ಅಪ ಹರಿಸಿಕೊಂಡು ಅಲ್ಲಿಯವರ ಮನಸ್ಸುಗಳನ್ನು ಬಹುಪರಿಯಾಗಿ ನೋಯಿಸಿದ್ದನು. ಶಿಕಂದರ ಬಾದಶಹನು ಬಾಬಿಲೋನದ ಜನರ ಧರ್ಮದಲ್ಲಿ ತಾನು ಕೈಹಾಕುವದಿಲ್ಲವೆಂದೂ ಅವರ ಧರ್ಮಸಂಸ್ಥೆಗಳಿಗೆ ನಡೆಯುತ್ತಿರುವ ವೃತ್ತಿ ಸ್ವಾಸ್ತಿಗಳನ್ನು ಯಥಾಪ್ರಕಾರವಾಗಿ ನಡಿಸುವನೆಂದೂ ಆಶ್ವಾಸನವನ್ನಿತ್ತದ್ದನ್ನು ಕೇಳಿಯಂತೂ ಸಾಕ್ಷಾತ್ ಸ್ವರ್ಗಾಧಿಪತಿಯೇ ಅವತಾರ ತಾಳಿ ಶಿಕಂದರನ ರೂಪದಿಂದ ತಮ್ಮಲ್ಲಿಗೆ ಬಂದಿರುವನೆಂದು ಅಲ್ಲಿಯವರು ತಿಳಕೊಂಡು, ನವೀನನಾದ ಬಾದಶಹನನ್ನು ಮನಮುಟ್ಟ ಹರಸಿದರು, ಅಲ್ಲಿಂದ ಶಿಕಂದರನು ದರಾಯಸನ ರಾಜಧಾನಿಯಾಗಿದ್ದ ಸೂಸಾ ಪಟ್ಟಣಕ್ಕೆ ಆಗಮನ ಮಾಡಿ ಅಲ್ಲಿಯ ರಾಜಮಂದಿರದಲ್ಲಿ ಒಂದೆರಡು ದಿವಸ ಇದ್ದು, ಆ ಮೇಲೆ ಪರ್ಸಿಪಾಲಿ ಎಂಬ ಪಟ್ಟಣಕ್ಕೆ ಹೋಗಿ, ಅಲ್ಲಿ ತನ್ನ ಡಂಕೆಯನ್ನು ಹೊಡಿಸಿ ಮತ್ತೆ ಉತ್ತರಾಭಿಮುಖನಾಗಿ ಹೊರಟು ಬ್ಯಾಕ್ಟ್ರಿಯಾ ಪ್ರಾಂತಕ್ಕೆ ಬಂದನು.

ದರಾಯಸನ ಬೆನ್ನಟ್ಟಿ ಅವನನ್ನು ಬಂದಿಯಾಗಿ ಹಿಡತರಬೇಕೇನೆಂದು