ಪುಟ:ಬೆಳಗಿದ ದೀಪಗಳು.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕಂದರ ಬಾದಶಹ

೭೫

ಸೇನಾಪತಿಯು ಕೇಳಲಾಗಿ, ಶಿಕಂದರ ಬಾದಶಹನು ನಿರಾತಂಕವಾದ ಮನಸ್ಸಿನಿಂದ ಹೇಳಿದ್ದು: "ಯಾತಕ್ಕೆ? ದರಾಯಸನಲ್ಲೇನು ಉಳಿದದೆ? ಗಾಯವನ್ನು ತಾಳಿದ ಸರ್ಪವು ಅಡಗಿಕೊಂಡಲ್ಲಿಯೇ ಇರಿವೆಗಳ ಬಾಧೆಯಿಂದ ಸತ್ತು ಹೋಗುವಂತೆ ದರಾಯಸನು ವಿಶ್ರಾಂತಿಯ ಅಭಾವ, ಮನಸ್ತಾಪ, ಸುಖೋಪಭೋಗಗಳ ನ್ಯೂನತೆ ಮುಂತಾದ ಹಲವು ದುಃಖಗಳಿಂದ ಸಂಪೀಡಿತನಾಗಿ ತನ್ನಷ್ಟಕ್ಕೆ ತಾನೇ ಬೇಗನೆ ಮೃತ್ಯುವಶನಾಗುವದು ಗಟ್ಟಿ.” ಬಾದಶಹನ ತರ್ಕದಲ್ಲಿ ದೋಷವಿದ್ದಿಲ್ಲ. ಗತಿಹೀನನಾಗಿ ತಿರುಗುತ್ತಿದ್ದ ದರಾಯಸನ ಪರಿವಾರದವರು ಮೆಲ್ಲಮೆಲ್ಲನೆ ಕಾಲುದೆಗೆದರು. ಕೂಳಿಲ್ಲದ್ದಕ್ಕಾಗಿ ಸೈನ್ಯ ಜನರೆಲ್ಲ ಕಂಡ ದಾರಿಯನ್ನು ಹಿಡಿದು ಹೋಗಿಬಿಟ್ಟರು. ಕುಳ್ಳಿರುವೆನೆಂದರೆ ಹಗಲು ಗಿಡದ ನೆಳಲು ಕೂಡ ಅವನಿಗೆ ಸಿಕ್ಕದಂತಾಯಿತು. ರಾತ್ರಿಯಲ್ಲಿ ಮಲಗುವೆನೆಂದರೆ ಸಮವಾಗಿದ್ದ ನೆಲ ಸಿಕ್ಕರೆ ಅವನಿಗೆ ಸಾಕಾಗಿತ್ತು. ಅಲ್ಪ ನಾಗಿದ್ದವನನ್ನು ಮೇಲಕ್ಕೆತ್ತಿಕೊಂಡು ತನ್ನ ರಾಜ್ಯದಲ್ಲಿ ಅತಿ ದೊಡ್ಡದಾದ ಅಧಿಕಾರವನ್ನು ಕೊಟ್ಟು ಕಾಪಾಡಿದಂಥ ತನ್ನ ಪಟ್ಟಶಿಷ್ಯನ ಬಳಿಗೆ ಹೋಗಿ ಅವನಲ್ಲಿ ನಾಲ್ಕೊಪ್ಪತ್ತು ವಿಶ್ರಾಂತಿಯನ್ನಾದರೂ ಹೊಂದುವೆನೆಂದು ದರಾಯಸನು ಹೋಗಲಾಗಿ, ಆ ಅಧಮನು ಅವನನ್ನು ತನ್ನ ಅಂಗಳದಲ್ಲಿ ನಿಲ್ಲಗೊಡಲಿಲ್ಲ. ತನ್ನೊಡದೆ ಒಂದೇ ಜೀವನಾಗಿ ವರ್ತಿಸುತ್ತಿದ್ದ ಚೇಝಸನೆಂಬ ಕತ್ರನನ ಬಳಿಗೆ ಗತವೈಭವನಾದ ದರಾಯಸನು ಹೋಗಲಾಗಿ ಆ ದುರಾತ್ಮನು ಅವನನ್ನು ಬಂದಿವಾಸದಲ್ಲಿಟ್ಟು ಭಾರವಾದ ಬೇಡಿಗಳಿಂದ ಬಿಗಿದುಬಿಟ್ಟನು. "ಆಪ ಭಲಾ ತೊ ಜಗ ಭಲಾ! ” ಎಂಬಂತೆ ದರಾಯಸನ ದೈವಬಲವು ಪ್ರಬಲವಾಗಿದ್ದಾಗ ಎಲ್ಲರೂ ಅವನ ಆಜ್ಞೆಯೆಂದರೆ ದೊಡ್ಡದೊಂದು ಪ್ರಸಾದವೇ ಎಂದು ತಿಳಿದವರಂತೆ ನಟಿಸುತ್ತಿದ್ದರು; ಬಾದಶಹನ ಹಿತಕ್ಕಾಗಿಯೇ ತಾವು ಜೀವಿಸುತ್ತಿರುವೆವೆಂದು ತೋರಿಸುತ್ತಿದ್ದರು, ಸೂರ್ಯ ಚಂದ್ರರ, ಮೇಘಮಾರುತರೂ, ಭೂದೇವತೆ ವನದೇವತೆಯರೂ ಬಾದಶಹನ ಹಿತಮಾಡುವದರಲ್ಲಿಯೇ ಯಾವಾಗಲೂ ನಿರತರಾಗಿರುವರೆಂದು ಕವಿಗಳು ವರ್ಣಿಸಿದರು. ಪಾಪ! ವಿಪನ್ನಾವಸ್ಥನಾದ ದರಾಯಸನ ಆಜ್ಞೆಯನ್ನೇಕೆ, ಪ್ರಾರ್ಥನೆಯನ್ನಾದರೂ ಕಿವಿಮೇಲೆ ಹಾಕಿಕೊಳ್ಳುವವರಿಲ್ಲ. ಬಾದಶಹನ ಹಿತಕ್ಕಾಗಿ ಜೀವಿಸಿರುವೆನೆಂದು ಬೊಗಳುತ್ತಿರುವ ಶ್ವಾನಸಮಾನನಾದ.