ವಿಷಯಕ್ಕೆ ಹೋಗು

ಪುಟ:ಬೆಳಗಿದ ದೀಪಗಳು.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಹಾರಾಣಾ ಪ್ರತಾಪಸಿಂಹ

ಅಗ್ನಿಯ ಜ್ವಾಲೆಯನ್ನು ಬಲಾತ್ಕಾರದಿಂದ ಅಧೋಮುಖವಾಗಿ ಮಾಡಬೇಕೆಂದು ಎಷ್ಟು ಮಾಡಿದರೂ ಅದು ಉದಮ್ಮುಖವಾಗಿಯೇ ಪ್ರಜ್ವಲಿಸುವದು; ಅದರಂತೆಯೇ ಧೈರ್ಯಶಾಲಿಯಾದ ಪುರುಷನು ಅನೇಕ ಸಂಕಟಗಳಿಂದ ಜರ್ಜರಿತನಾದರೂ ಅವನು ಅವುಗಳಿಗೆ ಈಡಾಗದೆ, ತನ್ನ ಶೀಲವನ್ನು ಕಾಯ್ದುಕೊಳ್ಳುತ್ತಾನೆಂಬ ಅಭಿಪ್ರಾಯವು ಮೇಲಿನ ಪದ್ಯದಲ್ಲಿ ವ್ಯಕ್ತವಾಗಿದೆ. ಈ ಪದ್ಯಾರ್ಥದ ಸತ್ಯತೆಯನ್ನು ತೋರಿಸುವ ಅತ್ಯಂತ ಉಜ್ವಲಿತವಾದ ಉದಾಹರಣವೆಂದರೆ, ಮೇವಾಡದೇಶದ ರಾಣಾ ಪ್ರತಾಪಸಿಂಹನ ಚರಿತ್ರವು. ಸ್ವದೇಶಾಭಿಮಾನದ ಸಂಚಾರವು ಯಾವ ಬಗೆಯದಾಗಿರುತ್ತದೆ, ಪ್ರಬಲರಾದ ಶತ್ರುಗಳಿಂದ ದುರ್ದೈವದಿಂದಲೂ ಸುತ್ತುಗಟ್ಟಲ್ಪಟ್ಟರೂ ಅವುಗಳನ್ನು ಗಣನೆಗೆ ತಾರದೆ, ಅವುಗಳ ಪೇಚಿನೊಳಗಿಂದ ನಿಶ್ಚಲವಾದ ಧೈರ್ಯದಿಂದಲೂ ದೃಢನಿಶ್ಚಯದಿಂದಲೂ ಪರಾಕ್ರಮಶಾಲಿಯಾದ ಪುರುಷನು ಹೇಗೆ ಪಾರಾಗುತ್ತಾನೆ, ನಾನಾವಿಧವಾದ ವಿಪತ್ತುಗಳೂ ಸಂಕಟಗಳೂ ಬೆನ್ನಟ್ಟಿದರೂ ಅವುಗಳಿಗೆ ಅಭಿಮುಖವಾಗಿ ನಿಂತು ಧೀರೋದಾತ್ತನಾದ ಪುರುಷನು ತನ್ನ ವ್ರತವನ್ನು ಹೇಗೆ ಪರಿಪಾಲಿಸುತ್ತಾನೆ ಮುಂತಾದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗಿದ್ದರೆ ಮೇವಾಡದ ರಾಣಾ ಪ್ರತಾಪಸಿಂಹನ ಚರಿತ್ರವನ್ನು ಅವಲೋಕಿಸಬೇಕು.

ಪ್ರತಾಪಸಿಂಹನು ಇ. ಸ. ೧೫೭೨ನೇ ಇಸ್ವಿಯಲ್ಲಿ ಮೇವಾಡ ದೇಶದ ಪಟ್ಟದ ಮೇಲೆ ಕುಳಿತನು. ಆದರೆ 'ಗಡೋಮೆ ಗಡ ಚಿತೋಡಗಡ' ಎಂದು ರಜಪೂತಸ್ಥಾನದಲ್ಲಿ ಪ್ರಸಿದ್ಧಿಯನ್ನು ಹೊಂದಿದ ಹಾಗೂ ರಜಪೂತರ ಅಭಿಮಾನಕ್ಕೆ ಅನೇಕ ಸಂಗತಿಗಳಿಂದ ಕಾರಣವಾಗಿದ್ದ ಚಿತೋಡಗಡದ ಪಟ್ಟವನ್ನು ಅವನು ಅಲಂಕರಿಸಲಿಲ್ಲ. ಪ್ರತಾಪಸಿಂಹನ ತಂದೆಯಾದ ಉದೇಸಿಂಗನು-ಯಾವವನ್ನು ಸ್ವಾಮಿಭಕ್ತಳಾದ ಪನ್ನಾ ತಾಯಿಯು ತನ್ನ