ಪುಟ:ಬೆಳಗಿದ ದೀಪಗಳು.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೪

ಸಂಪೂರ್ಣ-ಕಥೆಗಳು

ಸುತ್ತಲೂ ನೆರೆದು ಶತ್ರುಗಳ ಕೂಡ ಯುದ್ಧವನ್ನು ಮಾಡುವರೆಂದು ಪ್ರತಾಪ ಸಿಂಹನು ತಿಳಿದುಕೊಂಡಿದ್ದನು. ಆದರೆ ಈ ತನ್ನ ತಿಳುವಳಿಕೆಯು ತಪ್ಪಿನದಾಗಿತ್ತೆಂದು ಮುಂದೆ ಅವನ ನಿದರ್ಶನಕ್ಕೆ ಬಂದಿತು. ಪ್ರತಾಪಸಿಂಹನು ಅಕಬರನೊಡನೆ ಬಹಿರಂಗವಾಗಿ ವೈರವನ್ನು ಆರಂಭಿಸಿದನು. ಆದರೆ ಯಾವ ರಜಪೂತ ಸಂಸ್ಥಾನಿಕನಾದರೂ ಪ್ರತಾಪನ ಪಕ್ಷವನ್ನು ಕಟ್ಟಲಿಲ್ಲ. ಇಷ್ಟೇ ಅಲ್ಲ, ಇದಕ್ಕೆ ಪ್ರತಿಯಾಗಿ, ರಾಜಾ ಮಾನಸಿಂಗ ಮುಂತಾದ ರಜಪೂತ ರಾಜರು ಅಕಬರನ ಸೈನ್ಯವನ್ನು ಸೇರಿ ಪ್ರತಾಪಸಿಂಹನ ಕೂಡ ಯುದ್ಧ ಮಾಡಲು ಸನ್ನದ್ಧರಾದರು. ಪ್ರತಾಪಸಿಂಹನ ಪ್ರತ್ಯಕ್ಷ ತಮ್ಮನಾದ ಸಾಗರಜೀ ಎಂಬವನೂ ಕೂಡ ಅಕಬರನಿಗೆ ಸಹಾಯಕನಾಗಿ, ಅವನಿಂದ 'ಚಿತೋಡದ ರಾಣಾ' ಎಂಬ ಬಿರುದನ್ನು ಸಂಪಾದಿಸಿದನು. ಅವನ ಮತ್ತೊಬ್ಬ ತಮ್ಮನಾದ ಸೂಕ್ತ ನೆಂಬವನು ಅಕಬರನ 'ಮನಸಬದಾರ'ನಾದನು. ಈ ರೀತಿಯಾಗಿ ಮೊಗಲರಂಥ ಪ್ರಚಂಡವಾದ ಬಾದಶಾಹೀ ಸತ್ತೆಯ ಕೂಡ ಹೂಡಿದ ಕದನದಲ್ಲಿ ಪ್ರತಾಪಸಿಂಹನಿಗೆ ತನ್ನ ಸ್ವಂತ ಪರಾಕ್ರಮದ ಹೊರತು ಅನ್ಯ ರಜಪೂತ ರಾಜರ ಸಹಾಯವು ಯಾವ ಬಗೆಯಿಂದಲೂ ದೊರೆಯಲಿಲ್ಲ. ತುರ್ಕರ ಮುಂದೆ ನಿಂತು, ನಮ್ರವಾಗಿ ತಲೆಯನ್ನು ಬಾಗಿಸಿ ತನ್ನ ದೇಶದ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವದಕ್ಕಿಂತ ಸ್ವಾತಂತ್ರ್ಯದ ಸಲುವಾಗಿ ಹೋರಾಡಿ ಧಾರಾತೀರ್ಥದಲ್ಲಿ ಮರಣ ಹೊಂದುವದು ಲೇಸೆಂದು ಅವನ ಮನಸ್ಸಿನ ನಿಶ್ಚಯವಾಗಿತ್ತು. ಪ್ರತಾಪಸಿಂಹನು ಮೊಗಲರಿಗೆ ಎದುರಾಗಿ ನಿಲ್ಲುವದಕ್ಕೆ ತನ್ನ ಕೈಲಾದ ಮಟ್ಟಿಗೆ ಸೈನ್ಯದ ಸಿದ್ಧತೆಯನ್ನು ಮಾಡತೊಡಗಿದನು. ಮೊಟ್ಟಮೊದಲು ತನ್ನ ಪ್ರಜರನ್ನು ಆರವಲೀ ಪರ್ವತದ ಸುಸಂರಕ್ಷಿತವಾದ ಪ್ರದೇಶದಲ್ಲಿ ಒಯ್ದು, ಆ ಬಳಿಕ ಬಯಲು ಭೂಮಿಯೊಳಗಿನ ಪ್ರಾಂತವನ್ನೆಲ್ಲ ನಾಶ ಪಡಿಸಿ, ಸಮುದ್ರದ ತೆರೆಗಳಂತೆ ಏರಿ ಬರುವ ಮೊಗಲರ ಸೈನ್ಯವನ್ನು ವಿರೋಧಿಸುವದಕ್ಕಾಗಿ 'ಹಳದಿ ಘಾಟ'ದ ಗುಡ್ಡಗಾಡು ಪ್ರದೇಶದಲ್ಲಿ ಯುದ್ಧಾನುಕೂಲವಾದ ಸ್ಥಳಗಳನ್ನು ನೋಡಿ, ಪ್ರತಾಪಸಿಂಹನು ಅಲ್ಲಿ ತನ್ನ ಮೇವಾಡೀ ರಜಪೂತರನ್ನೂ ಭಿಲ್ಲರನ್ನೂ ನಿಲ್ಲಿಸಿದನು.

ಅಕಬರನು ತನ್ನ ಮಗನಾದ ಸೆಲೀಮನಿಗೆ ಮೊಗಲ ಸೈನ್ಯದ